ಸಚಿವರ ಅಕ್ರಮ ಮರೆಮಾಚುತ್ತಿರುವ ಸಿಎಂ: ಈಶ್ವರಪ್ಪ
ಕ.ಪ್ರ.ವಾರ್ತೆ ಮೈಸೂರು ಅ. 1
ಒಂದೆಡೆ ಸಂಪುಟ ಸಹದ್ಯೋಗಿಗಳು ನಡೆಸುತ್ತಿರುವ ಅಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆ ಮಾಚುತ್ತಿದ್ದರೆ, ಅಕ್ರಮ ಗಣಿಗಾರಿಕೆ ವಿಷಯದಲ್ಲಿ ರಾಜ್ಯಪಾಲರು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ತಾಲೂಕಿನ ಕಡಕೊಳದ ಕಾಳಿ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂತೋಷ್ ಲಾಡ್ ಮತ್ತು ಮೈಸೂರು ಭಾಗದ ಸಚಿವರೊಬ್ಬರ ಪುತ್ರ ನಡೆಸುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆಯೂ ಮೃದು ಧೋರಣೆ ಅನುಸರಿಸಿ, ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರಾಜ್ಯಪಾಲರು ಸ್ಪಷ್ಟ ನಿಲುವು ತಳೆಯುತ್ತಿಲ್ಲ. ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಕೂಡಲೆ ಸಚಿವ ಸಂಪುಟದಿಂದ ಕೈಬಿಡಬೇಕು ಎಂದಿದ್ದರು. ಆದರೆ ಈಗ ಸಂತೋಷ್ ಲಾಡ್ ವಿಚಾರದಲ್ಲಿ ರಾಜ್ಯಪಾಲರು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವವರೆಗೂ ಬಿಜೆಪಿ ಹೋರಾಟ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ಗೆ ಮುಖ್ಯಮಂತ್ರಿ, ಸಚಿವ ಸಂಪುಟ ಹಾಗೂ ರಾಜ್ಯದ ಜನತೆಯ ಮೇಲೆ ನಂಬಿಕೆ ಇಲ್ಲದ ಕಾರಣಕ್ಕೆ ಸಮನ್ವಯ ಸಮಿತಿ ರಟಿಸಿದೆ. ಆ ಸಮನ್ವಯ ಸಮಿತಿಗೆ ಕಳಂಕಿತರು ಎಂಬ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಂಡಿರುವ ಡಿ.ಕೆ. ಶಿವಕುಮಾರ್ ಸದಸ್ಯರಾಗಿದ್ದಾರೆ. ಇದು ಕಳ್ಳರ ಕೈಗೆ ಕೀಲಿಕೈ ಕೊಟ್ಟಂತಾಗಿದೆ ಎಂದು ಅವರು ಟೀಕಿಸಿದರು. ಎಸ್.ಎ. ರಾಮದಾಸ್, ಸಿದ್ದರಾಜು, ಸಿ.ಎಚ್. ವಿಜಯಶಂಕರ್ ಇದ್ದರು.