5ರಿಂದ ಜಿಲ್ಲೆಯಲ್ಲಿ ಅದ್ಧೂರಿ ದಸರಾ ಉತ್ಸವ: ಡಿಸಿ
ಕ.ಪ್ರ.ವಾರ್ತೆ ಚಾ.ನಗರ ಅ. 2
ಮೈಸೂರು ಜಿಲ್ಲೆಯಿಂದ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾದ 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎಂಟು ದಿನಗಳ ಕಾಲ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದೆ.
ಮೈಸೂರು ದಸರಾ ಉತ್ಸವ ಸಮಿತಿ, ಚಾಮರಾಜನಗರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎಂಟು ದಿನಗಳ ಚಾಮರಾಜನಗರ ದಸರಾ- 2013 ಉತ್ಸವಕ್ಕೆ ಅ.5ರಂದು ಬೆಳಗ್ಗೆ 10.44ಕ್ಕೆ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾಕಾರ್ಯದೊಂದಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಸರಾ ಉತ್ಸವವನ್ನು ಸಂಜೆ 6 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್ ಉದ್ಘಾಟಿಸಲಿದ್ದಾರೆ. ಕಂದಾಯ ಸಚಿವ ಶ್ರೀನಿವಾಸ್ಪ್ರಸಾದ್ ಜ್ಯೋತಿ ಬೆಳಗಿಸುವರು. ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಭಾಗವಹಿಸಲಿದ್ದಾರೆ.
ದಸರಾ ಮಹೋತ್ಸವದ ಕೊನೆಯ ದಿನವಾದ ಅ.12ರಂದು ಸಂಜೆ 4 ಗಂಟೆಗೆ ಜಿಲ್ಲಾಡಳಿತ ಭವನದಿಂದ ವಿವಿಧ ಜಾನಪದ ಕಲಾತಂಡಗಳಿಂದ ಮೆರವಣಿಗೆ ಹೊರಡಲಿದ್ದು, ಪಚ್ಚಪ್ಪ ವೃತ್ತದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮಾರ್ಗವಾಗಿ ಗುಂಡ್ಲುಪೇಟೆ ವೃತ್ತದ ಮೂಲಕ ವೇದಿಕೆ ತಲುಪಲಿದೆ. ಎಸ್ಪಿ ರಾಜೇಂದ್ರ ಪ್ರಸಾದ್, ಎಡಿಸಿ ಭಾರತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜಪ್ಪ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಇದ್ದರು.