ಅರಣ್ಯೀಕರಣಕ್ಕೆ ಮುಂದಾಗುವಂತೆ ಸೂಚನೆ
ಕ.ಪ್ರ.ವಾರ್ತೆ ಮೈಸೂರು ಅ. 2
ಅರಣ್ಯೀಕರಣಕ್ಕೆ ಇರುವ ಅವಕಾಶ ಬಳಸಿಕೊಂಡು ಪ್ರಾಣಿ- ಪಕ್ಷಿಗಳಿಗೆ ಮತ್ತು ದಾರಿ ಹೋಕರಿಗೆ ನೆರಳು ನೀಡಿ ನೆರವಾಗುವ ಗಿಡಗಳನ್ನು ರಸ್ತೆಬದಿಗಳಲ್ಲಿ ನೆಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್ ರಾಜ್ಯದ ಎಲ್ಲಾ ಯೋಜನೆಯ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ರಾಜ್ಯದ ಎಲ್ಲಾ 175 ತಾಲೂಕುಗಳ ಯೋಜನೆಯ ಅನುಷ್ಠಾನಾಧಿಕಾರಿಗಳೊಂದಿಗೆ ಎರಡನೇ ಮಾಸಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 100 ದಿನಗಳ ಕೂಲಿ, ಕೂಲಿ ದರ 174, ಹೆಣ್ಣು- ಗಂಡಿಗೆ ಸಮಾನ ಕೂಲಿ ಎಂಬ ಮೂರು ಪ್ರಮುಖ ಅಂಶಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಮಾಡುವಂತೆ ತಿಳಿಸಿದರು.
ಇದು ಕೂಲಿ ಆಧಾರಿತ ಕಾರ್ಯಕ್ರಮವೇ ಹೊರತು ಕಟ್ಟಡ ನಿರ್ಮಾಣ ಕಾರ್ಯಕ್ರಮ ಅಲ್ಲ. ಒಂದು ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ ಮತ್ತು ಸಾಮಗ್ರಿ ಅನುಪಾತ 60:40 ಇರುವಂತೆ ನೋಡಿಕೊಂಡು ಕಾರ್ಮಿಕರಿಗೆ ಹೆಚ್ಚು ಕೂಲಿ ಕೆಲಸ ನೀಡುವ ಮೂಲಕ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ರಾಜ್ಯದಲ್ಲಿ ಸುಮಾರು 10 ಸಾವಿರ ಕುಟುಂಬಗಳಿಗೆ ಮಾತ್ರ 100 ದಿನಗಳ ಕೂಲಿ ಒದಗಿಸಲು ಸಾಧ್ಯವಾಗಿದೆ.
ಕೂಲಿ ವಿಳಂಬ ಮಾಡದಂತೆ ಎಚ್ಚರವಹಿಸಿ: ಮಾನವ ದಿನಗಳ ಉದ್ಯೋಗ ಒದಗಿಸುವ ಪ್ರಯತ್ನ ಹೆಚ್ಚಾಗಬೇಕು. ಸರ್ಕಾರಿ ಹೊಸ ಆದೇಶದಂತೆ ಕಾಯಕ ಸಂಘಗಳನ್ನು ರಚಿಸಿಕೊಂಡು ಕಾಯಕ ಬಂಧುಗಳ ಮೂಲಕ ಕೂಲಿ ಬೇಡಿಕೆ ಪಡೆಯಬೇಕು. ಪ್ರತಿ ಗ್ರಾಪಂನಲ್ಲಿ ಕನಿಷ್ಠ 100 ಎನ್ಎಂಆರ್ಗಳು ನಿರ್ವಹಣೆಯಾಗುವಂತೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಕೂಲಿ ಪಾವತಿ ವಿಳಂಬವಾಗದಂತೆ ಎಚ್ಚರಿಕೆ ವಹಿಸಬೇಕು ತಪ್ಪಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ರಾಜ್ಯದ ಯಾದಗಿರಿ, ಮಂಡ್ಯ, ಕೋಲಾರ, ರಾಯಚೂರು, ರಾಮನಗರ, ಗುಲ್ಬರ್ಗ ಜಿಲ್ಲೆಗಳಲ್ಲಿ ಯೋಜನೆ ತೀವ್ರ ಹಿನ್ನಡೆಯಾಗಿದ್ದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ಮಾನವ ದಿನಗಳ ಸೃಜನೆಯಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ಯೋಜನೆಯ ಪರಿಣಾಮಕಾರಿ ಅನುಷ್ಠಾನನಕ್ಕಾಗಿ 800 ಸಿವಿಲ್ ಎಂಜಿನಿಯರಿಂಗ್ ಅಭ್ಯರ್ಥಿಗಳು, 200 ಕೃಷಿ ಮತ್ತು ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ಐದು ಗ್ರಾಪಂಗಳಿಗೆ ಒಬ್ಬರಂತೆ ತಾಂತ್ರಿಕ ಸಿಬ್ಬಂದಿ ಒದಗಿಸಲಾಗಿದೆ. ತಾಂತ್ರಿಕ ಸಿಬ್ಬಂದಿಯೊಂದಿಗೆ ಪ್ರತಿ ಗ್ರಾಪಂನವರು ಗ್ರಾಮಗಳಲ್ಲಿ ವಿಶೇಷ ಅಭಿಯಾನ ನಡೆಸಿ ಕಾರ್ಮಿಕರನ್ನು ಸಂಘಟಿಸಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
ಹೆಚ್ಚುವರಿ ಅನುದಾನ: ರಾಜ್ಯದಲ್ಲಿ 1 ಲಕ್ಷ ಗ್ರಾಪಂ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ವಾರ್ಡ್ ಸಭೆಗಳನ್ನು ನಡೆಸಿ ಯೋಜನೆಯಡಿ 15 ಪ್ರವರ್ಗದ ಕೆಲಸಗಳನ್ನು ಜನರೊಂದಿಗೆ ಚರ್ಚಿಸಿ ನಿಯಮಾನುಸಾರ ಜಾರಿ ಮಾಡಬೇಕು. ಹೆಚ್ಚು ಹೆಚ್ಚು ಮಾನವ ದಿನಗಳು ಸೃಷ್ಟಿಯಾದರೆ ಗ್ರಾಪಂಗಳು ಪ್ರಸ್ತಾವ ಸಲ್ಲಿಸಿದರೆ ಹೆಚ್ಚುವರಿ ಅನುದಾನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯೀಕರಣ ಯೋಜನೆಯ ನಿರ್ದೇಶಕ ನವೀನ್ರಾಜ್ ಸಿಂಗ್, ಎಂಜಿ ಎನ್ಆರ್ಇಜಿಎ ಅರಣ್ಯ ನಿರ್ದೇಶಕ ಪಿ.ಸಿ. ರೇ, ಎಂಜಿ ಎನ್ಆರ್ಇಜಿಎ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೇಶಕ ಚಂದ್ರಶೇಖರ ಮಸಗುಪ್ಪಿ, ಅನಸಾ ರಾಗ್ರಾ ಸಂಸ್ಥೆಯ ನಿರ್ದೇಶಕ ಶಿವಶಂಕರ, ಮೈಸೂರು ಜಿಪಂ ಸಿಇಓ ಪಿ.ಎ. ಗೋಪಾಲ್ ಇದ್ದರು. ಕೆ.ಆರ್. ಶಂಕರ್ ನಿರೂಪಿಸಿದರು.