ಅರಮನೆಗೆ ಎಲ್ಇಡಿ ಬೆಳಕಿನ ಚಿತ್ತಾರ
ಕ.ಪ್ರ.ವಾರ್ತೆ ಮೈಸೂರು ಅ. 2
ಮೈಸೂರಿಗೆ ಬರುವ ಅದೆಷ್ಟೋ ಪ್ರವಾಸಿಗರು ಮೊದಲು ನೋಡುವುದು ದೀಪಾಂಲಕೃತವಾದ ಅರಮನೆಯನ್ನು. ಪ್ರವಾಸಿಗರ ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಗರದ ರಾಜಬೀದಿಗಳನ್ನು ಎಲ್ಇಡಿ ಹಾಗೂ ಸಿಎಫ್ಎಲ್ ಬೆಳಕಿನ ಚಿತ್ತಾರದಿಂದ ಅಲಂಕರಿಸಲಾಗಿದೆ.
ನಗರವನ್ನು ದೀಪಾಲಂಕಾರದಿಂದ ಸಿಂಗರಿಸಲು ಹೊಣೆ ಹೊತ್ತಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) 403ನೇ ದಸರಾವನ್ನು ಬೆಳಕಿನೊಂದಿಗೆ ಹಬ್ಬ ಆಚರಿಸಲು ನಿರ್ಧರಿಸಿದೆ. ಅದರಂತೆ ನಗರದ ಒಟ್ಟು 40 ವೃತ್ತಗಳು, ಸುಮಾರು 30 ಕಿ.ಮೀ. ಉದ್ದದ ರಸ್ತೆಗಳ ಇಕ್ಕೆಲಗಳಲ್ಲಿರುವ ಮರಗಳಿಗೆ ಅತ್ಯಂತ ಕಡಿಮೆ ವಿದ್ಯುತ್ನಿಂದ ಬೆಳಗು ಪರಿಸರ ಸ್ನೇಹಿ ಎಲ್ಇಡಿ ಹಾಗೂ ಸಿಎಫ್ಎಲ್ ಬಲ್ಬ್ಗಳ ಸರಮಾಲೆಯನ್ನು ಸಿಂಗರಿಸಲಾಗಿದೆ. ಚೀನಾದ ವೃತ್ತಾಕಾರದ ಬೆಲ್ ರೂಪ, ತಳಿರು ತೋರಣ ರೂಪಾಕಾರದಲ್ಲಿ ಅಲಂಕಾರ ಮಾಡಲಾಗಿದೆ.
ಪ್ರತಿ ವರ್ಷ ಥಾಮಸ್ ಆಲ್ವಾ ಎಡಿಸನ್ ಕಂಡುಹಿಡಿದ ಬುರುಡೆಯಾಕಾರದ ಬಲ್ಬ್ಗಳನ್ನು ಬಳಸಲಾಗುತ್ತಿತ್ತು. ಇದರಿಂದ ಪ್ರತಿ ವರ್ಷ ಸೆಸ್ಕ್ಗೆ 17.77 ಲಕ್ಷ ಖರ್ಚು ಬೀಳುತ್ತಿತ್ತು. ಅಲ್ಲದೇ ವಿದ್ಯುತ್ ಕ್ಷಾಮವೂ ಎದುರಾಗುತ್ತಿತ್ತು. ಈ ಅಪವ್ಯಯಕ್ಕೆ ನಿಯಂತ್ರಣ ಹೇರಬೇಕೆಂದು ನಿರ್ಧರಿಸಿದ ಸರ್ಕಾರ ಎಲ್ಇಡಿ ಹಾಗೂ ಸಿಎಫ್ಎಲ್ ಬಲ್ಬ್ ಬಳಕೆಯ ಬಗೆಗೆ ವಿಶೇಷ ಜಾಗೃತಿ ಮೂಡಿಸಿ ಅದನ್ನು ಮೈಸೂರು ದಸರಾದಲ್ಲಿ ಜಾರಿಗೆ ತಂದಿತು. ಪರಿಣಾಮ ಸೆಸ್ಕ್ಗೆ ಶೇ.40 ರಷ್ಟು ವಿದ್ಯುತ್ ಬಳಕೆಗೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಿದೆ. ಈ ಹಿಂದೆ ಬಳಕೆಯಾಗುತ್ತಿದ್ದದ್ದು ಪ್ರತಿಶತ 17,0000 ಯೂನಿಟ್. ಪ್ರಸ್ತುತ ಬಳಕೆಯಾಗುತ್ತಿರುವುದು ಪ್ರತಿಶತ 4,0000 ಯೂನಿಟ್ಗಳು. ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್ ಉತ್ಪಾದನೆಗೆ ಸಮ ಎಂಬ ಆಲೋಚನೆಯೊಂದಿಗೆ ಸೆಸ್ಕ್ ಉರಿಯುವ ಕಲ್ಲಿದ್ದಲು, ಅಣು ಸ್ಥಾವರಕ್ಕೆ ಕೆಲಸ ಕಡಿಮೆ ಮಾಡಿದೆ. ಎಲ್ಇಡಿ ಮತ್ತು ಸಿಎಫ್ಎಲ್ ದೀಪಗಳ ಬೆಲೆ ಹೆಚ್ಚಿರುವುದು ಹಾಗೂ ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಹೊಸ ಪ್ರಯೋಗ ಮಾಡಿದೆ. ದಸರಾ ಆಚರಣೆಯೊಂದಿಗೆ ವಿದ್ಯುತ್ ಉಳಿತಾಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸೆಸ್ಕ್ ಎಂಡಿ ಎ.ಬಿ. ಇಬ್ರಾಹಿಂ, ದಸರಾ ದೀಪಾಲಂಕಾರ ಉಪಸಮಿತಿ ಅಧ್ಯಕ್ಷ ರಫೀಕ್ ಅಹಮ್ಮದ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಮನ ಸೆಳೆಯಲಿದೆ ಮೇಳ: ಇದೇ ಮೊದಲ ಬಾರಿಗೆ ಸೆಸ್ಕ್ ವತಿಯಿಂದ ನಗರದ ದಸರಾ ವಸ್ತುಪ್ರದರ್ಶನ ಪ್ರವೇಶ ದ್ವಾರದ ಬಳಿ ವಿದ್ಯುತ್ ಮೇಳವನ್ನು ಆಯೋಜಿಸಲಿದ್ದು, ಅದಕ್ಕಾಗಿ ಮಳಿಗೆಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ದಿನನಿತ್ಯದ ಜೀವನದಲ್ಲಿ ಅವಶ್ಯವಾಗಿರುವ ವಿದ್ಯುತ್ ಉತ್ಪಾದನೆಯ ಮೂಲಗಳಾದ ಸೌರಶಕ್ತಿ, ಪವನ ಶಕ್ತಿಯ ಬಗೆಗೂ ಜನರಿಗೆ ಅರಿವು ಮೂಡಿಸಲು ಈ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಬಗ್ಗೆ ಆಸಕ್ತಿ ಇರುವ ಮಳಿಗೆಗಳು ಜನರಿಗೆ ತಿಳಿವಳಿಕೆ ನೀಡಲು ಮುಂದೆ ಬರಬಹುದು ಎಂದು ಇಬ್ರಾಹಿಂ ತಿಳಿಸಿದರು.