ಕೆರೆ ಕಾಮಗಾರಿಗೆ ಚಾಲನೆ
ಕ.ಪ್ರ.ವಾರ್ತೆ ಭೇರ್ಯ ಅ. 2
ಕೆ.ಆರ್. ನಗರ ತಾಲೂಕಿನ ನರಚನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಕ್ರಿಯಾ ಯೋಜನೆಯಲ್ಲಿರುವ ದೊಡ್ಡಕೊಳ ಮತ್ತು ಕುಂಚಕಟ್ಟೆ ಕೆರೆ ಕಾಮಗಾರಿಗೆ ಅಧ್ಯಕ್ಷೆ ಕಲಾವತಿ ನಾಗರಾಜ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಪಿಡಿಒ ಸಂತೋಷ್ ಎನ್ಆರ್ಇಜಿಎ ಯೋಜನೆಯಡಿಯಲ್ಲಿ ನಮ್ಮ ಹೊಲ ನಮ್ಮ ದಾರಿ ಮತ್ತು ವೈಯಕ್ತಿಕ ಪಲಾನುಭವಿಗಳಿಗೆ ಶೌಚಾಲಯ ಕಟ್ಟಿಸುವುದು, ತೋಟಗಾರಿಕೆ, ರೇಷ್ಮೆ, ಜಲಾನಯನ, ಪಶುಪಾಲನಾ ಮತ್ತು ಇತರೆ ಇಲಾಖೆಗಳ ಸಹಾಯದೊಂದಿಗೆ ಗ್ರಾಮಾಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿ, ಗ್ರಾಮಸ್ಥರ ಸಹಕಾರ ಮತ್ತು ನೆರವು ಅಗತ್ಯ ಎಂದು ತಿಳಿಸಿದರು.
ಉಪಾಧ್ಯಕ್ಷ ರಾಚಪ್ಪಾಜಿ, ಸದಸ್ಯರಾದ ದಾಕ್ಷಾಯಿಣಿ ನಟರಾಜ್, ಸುಬ್ಬಯ್ಯ, ಸ್ವಾಮಿ, ಎಚ್.ಟಿ. ರಮೇಶ್, ವಿಜಯಕುಮಾರ್, ನಾಗಮ್ಮ ರಾಮೇಗೌಡ, ಮಹದೇವ, ಪದ್ಮಮ್ಮ ಮಹದೇವ, ಅಪ್ಪಾಜಿ, ಪ್ರೇಮಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ ತಮ್ಮಯಪ್ಪ, ಗ್ರಾಮದ ಹಿರಿಯ ಮುಖಂಡರಾದ ಪರ್ವತಪ್ಪ, ಯಾಲಕ್ಕಯ್ಯ, ಗ್ರಾಪಂ ಸಿಬ್ಬಂದಿ ಇದ್ದರು.
ಕಲಾತಂಡಕ್ಕೆ ಪ್ರತಿಭೆಯೇ ಮಾನದಂಡ: ಡಿಸಿ
ಮೈಸೂರು: ಸಾಂಸ್ಕೃತಿಕ ಕಲಾತಂಡಗಳ ಆಯ್ಕೆಗೆ ಶಿಫಾರಸು ಇದ್ದರೂ, ಪ್ರತಿಭೆಯನ್ನು ಮಾನದಂಡವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಸ್ಪಷ್ಟಪಡಿಸಿದ್ದಾರೆ. ಕನ್ನಡಪ್ರಭದಲ್ಲಿ ಬುಧವಾರ ಪ್ರಕಟಗೊಂಡ ಶಿಫಾರಸುಗಳ ಮಹಾಪೂರ ವರದಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಫಾರಸು ಪತ್ರದೊಂದಿಗೆ ಅರ್ಜಿ ಸಲ್ಲಿಸಿದ್ದು ಸಹಜ. ಆದರೆ ಆಯ್ಕೆಯ ವೇಳೆ ಶಿಫಾರಸು ಜೊತೆಗೆ ಪ್ರತಿಭೆಯನ್ನು ಮಾನದಂಡವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.
ಕರು ಕೊಂದ ಚಿರತೆ
ಬೈಲುಕುಪ್ಪೆ: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಚಿರತೆಯೊಂದು ಕೊಂದಿರುವ ಘಟನೆ ಬುಧವಾರ ಬೆಳಗ್ಗೆ ಸಮೀಪದ ಗಾಂಧಿನಗರ ಒಂದನೇ ಬ್ಲಾಕ್ನಲ್ಲಿ ಜರುಗಿದೆ. ಗಾಂಧಿನಗರದ ನಿವಾಸಿ ಬೋರೇಗೌಡರ ಪುತ್ರ ಕೃಷ್ಣ ಎಂಬವರಿಗೆ ಸೇರಿದ ಮನೆಗೆ ಬುಧವಾರ ಬೆಳಗ್ಗೆ ಚಿರತೆಯೊಂದು ನುಗ್ಗಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಹೊತ್ತುಕೊಂಡು ಹೋಗಿ ಊರಿನ ಹೊರಗೆ ತಿಂದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಡಂಚಿನ ಗ್ರಾಮವಾದ ತಿರುಮಲಾಪುರ, ಗಾಂಧಿನಗರ, ದೊಡ್ಡಹೊನ್ನೂರು, ಚಿಕ್ಕಹೊನ್ನೂರು ಇನ್ನು ಮುಂತಾದ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಹಾಗೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಾಡು ಪ್ರಾಣಿಗಳೆಲ್ಲ ಊರೊಳಗೆ ನುಗ್ಗಿ ನಾಯಿ, ಕುರಿ, ಆಡುಗಳನ್ನು ತಿಂದು ಹಾಕುತ್ತಿವೆ. ಇದರಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ವಾಸಿಸಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಿಯಕರನಿಂದಲೇ ಮಹಿಳೆ ಹತ್ಯೆ
ಮೈಸೂರು: ಪತಿಯಿಂದ ದೂರವಾಗಿ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯು ತನ್ನ ಪ್ರಿಯಕರನಿಂದಲೇ ಕೊಲೆಯಾಗಿರುವ ಘಟನೆ ಬುಧವಾರ ನಡೆದಿದೆ. ಸಿದ್ದಾರ್ಥ ಬಡಾವಣೆ ಬನ್ನಿಕಾಳಮ್ಮ ದೇವಸ್ಥಾನ ಹಿಂಭಾಗದ ನಿವಾಸಿ ಮಹದೇವ ಎಂಬವರ ಪತ್ನಿ ಯಶೋದಾ (40) ಕೊಲೆಯಾದವರು. ಇವರಿಗೆ ಮಹದೇವ ಎಂಬವರೊಂದಿಗೆ ಮದುವೆಯಾಗಿದ್ದು, ಒಬ್ಬ ಪುತ್ರ ಇದ್ದಾನೆ. 12 ವರ್ಷಗಳಿಂದ ಪತಿಯಿಂದ ದೂರವಾಗಿದ್ದ ಯಶೋದಾ ಮಗನೊಂದಿಗೆ ಸಿದ್ದಾರ್ಥ ಬಡಾವಣೆಯಲ್ಲಿ ವಾಸವಾಗಿದ್ದರು. ಮಗ ಹಾಲಿನ ಡೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಯಶೋದಾಗೆ ಕುರುಬಾರಹಳ್ಳಿ ನಿವಾಸಿ ಬೀರ (32) ಎಂಬಾತನೊಂದಿಗೆ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಈ ಇಬ್ಬರು ಕಂಠಪೂರ್ತಿ ಕುಡಿದು ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಮಂಗಳವಾರ ರಾತ್ರಿ ಸಹ ಯಶೋದಾ ಮತ್ತು ಬೀರ ಕುಡಿದು ಗಲಾಟೆ ಮಾಡಿಕೊಂಡಿದ್ದು, ಯಶೋದಾ ತಲೆಗೆ ಬೀರ ಹೊಡೆದಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ರಾತ್ರಿ ಕೆಲಸಕ್ಕೆ ಹೋಗಿದ್ದ ಆಕೆಯ ಮಗ ಬುಧವಾರ ನೋಡಿದಾಗ ತಾಯಿ ಮೃತಪಟ್ಟಿದ್ದು ಕಂಡು ಬಂದಿತು. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಜರಬಾದ್ ಠಾಣೆ ಇನ್ಸ್ಪೆಕ್ಟರ್ ಕೆ.ಸಿ. ಪೂವಯ್ಯ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಬೀರನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಯುವಕ ನಾಪತ್ತೆ
ಮೈಸೂರು: ವಿಜಯನಗರ ಔತಣ ಹೊಟೇಲ್ನ ಕ್ಯಾಷಿಯರ್ ಎಚ್.ಆರ್. ಮೋಹನ್ಕುಮಾರ್ ಎಂಬವರ ಪುತ್ರ ಎಂ. ನಿಖಿಲ್ (19) ನಾಪತ್ತೆಯಾಗಿದ್ದಾರೆ. ನಿಖಿಲ್ ಸಹ ಔತಣ ಹೊಟೇಲ್ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು. ಸೆ.26 ರಿಂದ ನಿಖಿಲ್ ನಾಪತ್ತೆಯಾಗಿದ್ದಾರೆ. ಚಹರೆ- 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಬಲಗೈನಲ್ಲಿ ಕಾವ್ಯಮ್ಮ ಎಂಬ ಹಚ್ಚೆ ಇದೆ. ಕನ್ನಡ, ತಮಿಳು ಮತ್ತು ಹಿಂದಿ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 24118317 ಸಂಪರ್ಕಿಸಲು ವಿಜಯನಗರ ಠಾಣೆ ಎಎಸ್ಐ ಚಿಕ್ಕಹನುಮಯ್ಯ ಕೋರಿದ್ದಾರೆ.