ಗಾಂಧಿ ಹಿಂದೆಂದಿಗಿಂತ ಈಗ ಹೆಚ್ಚು ಪ್ರಸ್ತುತ
ಕ.ಪ್ರ.ವಾರ್ತೆ ಮೈಸೂರು ಅ. 2
ಇಂದು ಭ್ರಷ್ಟಾಚಾರ ಒಂದು ಕಾಯಿಲೆಯಲ್ಲ ಸತ್ಯ ಅರಿವಾಗಿದೆ. ಹಾಗಾಗಿ ಮಹಾತ್ಮ ಗಾಂಧೀಜಿ ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ನ ಸಂಸ್ಥಾಪಕ ಅಧ್ಯಕ್ಷ ಡಾ.ಆರ್. ಬಾಲಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಗಾಂಧಿ ಭವನ ಹಾಗೂ ಜ್ಞಾನದೀಪ ಎಜುಕೇಷನ್ ಟ್ರಸ್ಟ್, ಸಪ್ತಗಿರಿ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ 145ನೇ ಗಾಂಧಿಜಯಂತಿ ಹಾಗೂ 109ನೇ ಲಾಲ್ ಬಹದ್ಧೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೈನಿಕ ಚಟುವಟಿಕೆಗಳನ್ನು ನೋಡಿದರೆ ಇವೆಲ್ಲವನ್ನು ಸರಿಮಾಡಲು ಗಾಂಧಿ ಇಲ್ಲವಲ್ಲ ಎಂಬ ಸಂಕಟವಾದರೆ ಮತ್ತೊಂದು ಕಡೆ ಅವರು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಸಂತೋಷ ಒಂದು ಕ್ಷಣ ಬಂದು ಹೋಗಿಬಿಡುತ್ತದೆ. ಶಾಂತಿ ಮತ್ತು ಸಂಘರ್ಷದ ಸಂದೇಶ ಸಾರುವ ಹೊತ್ತಲ್ಲಿ ಗಾಂಧಿಯ ತತ್ವವನ್ನು ಮರೆಯುವುದಿರಲ್ಲಿ ಗಾಂಧಿಯನ್ನೇ ಮರೆತಿದ್ದೇವೆ. ನಾನೊಮ್ಮೆ ಸಬರಮತಿ ಆಶ್ರಮಕ್ಕೆ ಹೋಗಿದ್ದಾಗ ಅಲ್ಲಿ ಈ ರೀತಿಯ ಭಾವನೆ ಕಾಡಿತು. ಅಲ್ಲಿ ಗಾಂಧಿಯನ್ನು ಹೊರಗೆ ಓಡಿಸಿದ್ದಾರೆ. ಆತ್ಮಶಾಂತಿಗೆ ಹೋದ ನನಗೆ ದಿಗಿಲು ಹುಟ್ಟಿತು ಎಂದರು.
ಖರೀದಿಸುವ ಶಕ್ತಿ ತುಂಬಿ: ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಒತ್ತೆ ಇಟ್ಟ ಗಾಂಧಿ ಎಂದಿಗೂ ಹೊಗಳಿಕೆಗೆ ಹಪಹಪಿಸಿದವರಲ್ಲ. ತಾವು ಮಹಾತ್ಮರು ಎಂಬ ಗೌರವಕ್ಕೆ ಪಾತ್ರವಾಗುವುದು ಕಷ್ಟ ಎನ್ನುತ್ತಿದ್ದರು. ಗಾಂಧಿಜಿಯವರ ಪ್ರಕಾರ ಬಡತನ ಹೋಗಲಾಡಿಸಲು ಸ್ವಾಭಿಮಾನಿ ಬದುಕು ಕಟ್ಟಿಕೊಡಬೇಕು. ಅದು ಬಿಟ್ಟು 1ಗೆ 1 ಕೆಜಿ ಅಕ್ಕಿ ಕೊಡುವುದನ್ನು ಬಿಟ್ಟು, ಅದೇ 40ಗೆ 1 ಕೆಜಿ ಅಕ್ಕಿ ಖರೀದಿಸುವ ಶಕ್ತಿ ತುಂಬಬೇಕು. ಯಾಕೆಂದರೆ ಸಾರ್ವಜನಿಕರು ಭಿಕ್ಷುಕರಲ್ಲ ಎಂದು ಆಡಳಿತ ವ್ಯವಸ್ಥೆಯನ್ನು ಟೀಕಿಸಿದರು.
ಅಸ್ತ್ರ ಶಸ್ತ್ರಾಸ್ತ್ರಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯೇ ತಯಾರಿಸಬೇಕೆಂಬ ಕಾನೂನಿಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ, ಖಾಸಗಿಯವರು ಶಸ್ತ್ರಾಸ್ತ್ರ ತಯಾರಿಸಲು ಅನುಮತಿ ನೀಡಿದೆ. ರಿಲಯನ್ಸ್, ಟಾಟಾ ಕಂಪನಿಗಳು ರಹದಾರಿ ಪಡೆದುಕೊಂಡಿವೆ. ದುರಾದೃಷ್ಟವಶಾತ್ ಇದು ಜಾರಿಗೆ ಬಂದು 8 ವರ್ಷ ಕಳೆದಿದ್ದರೂ ಯಾರಿಗೂ ಗೊತ್ತೆ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಸಿ. ಬಸವರಾಜು, ಗಾಂಧಿ ಭವನ ಗೌರವ ನಿರ್ದೇಶಕಿ ಪ್ರೊ.ಸುಗೀತ ಸುವರ್ಣ, ಜ್ಞಾನದೀಪ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಆನಂದಕುಮಾರ್, ಸಪ್ತಗಿರಿ ಪಿಯು ಕಾಲೇಜು ಪ್ರಾಂಶುಪಾಲ ಜಿ.ಎನ್. ಶ್ರೀನಿವಾಸಮೂರ್ತಿ ಇದ್ದರು.