ಭೈರಾಪುರ ಪಿಡಿಒ ಪರ- ವಿರುದ್ಧ ಸದಸ್ಯರ ಪ್ರತಿಭಟನೆ
ಕ.ಪ್ರ.ವಾರ್ತೆ ಟಿ.ನರಸೀಪುರ ಅ. 2
ಭೈರಾಪುರ ಗ್ರಾಪಂ ಸದಸ್ಯರೆ ಪಿಡಿಒ ಪರ, ವಿರೋಧ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಪಟ್ಟಣದ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಭೈರಾಪುರ ಗ್ರಾಪಂ ಕಚೇರಿ ಮುಂಭಾಗ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಹಾಗೂ ಉಪಾಧ್ಯಕ್ಷ ಪುಟ್ಟು ಸೇರಿದಂತೆ ಕೆಲವು ಸದಸ್ಯರು ತಮ್ಮ ಸಾರ್ವಜನಿಕ ಕೆಲಸ ಕಾಯಂಗಳಿಗೆ ಪಿಡಿಒ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಪ್ರತಿಭಟನೆ ಪ್ರಾರಂಭಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸದಸ್ಯರಾದ ಬಿ.ಎಲ್. ಮಹದೇವು, ದಿವಾಕರ, ಕೆ.ಲೀಲಾ, ಶಿವಮ್ಮ, ಎಂ.ಮಿಥುನ ಅವರೆಲ್ಲರೂ ಅಭಿವೃದ್ಧಿ ಅಧಿಕಾರಿ ಕೆ.ಪಿ. ಮಹೇಶ್ ವಿರುದ್ಧ ಧಿಕ್ಕಾರ ಕೂಗಿದರು. ಪಂಚಾಯಿತಿಗೆ ನಿಯೋಜನೆಗೊಂಡು ತಿಂಗಳಾಗಿದೆ. ಯಾವುದೇ ಸಮಸ್ಯೆಗಳನ್ನು ಹೇಳಿದರೆ ಲಿಖಿತವಾಗಿ ಬರೆದು ಕೊಡಿ ಅಂತಾರೆ. ಸದಸ್ಯರಾದ ನಮ್ಮ ಮಾತಿಗೆ ಮನ್ನಣೆ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷೆ ಪದ್ಮಾ ವೆಂಕಟೇಶ್, ಉಪಾಧ್ಯಕ್ಷ ಪುಟ್ಟು ಹಾಗೂ ಹಲವು ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆಗೆ ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಮುಖಂಡ ಸಿ.ಡಿ. ವೆಂಕಟೇಶ್, ಬಿ.ಎಸ್. ಸುಬ್ಬರಾಜು ಹಾಗೂ ಭೈರಾಪುರದ ಕೆಲವು ನಿವಾಸಿಗಳು ಬೆಂಬಲ ಸೂಚಿಸಿ ಪಂಚಾಯಿತಿ ಎದುರು ಜಮಾಯಿಸಿದ್ದರು.
ಪಿಡಿಒ ಪರ ನಿಂತ ಸದಸ್ಯರು: ಭೈರಾಪುರ ಗ್ರಾಪಂ ಆವರಣದ ಮುಂಭಾಗ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರೆ, ಮಾಜಿ ಅಧ್ಯಕ್ಷ ಕರಿಯಪ್ಪ, ನಾಗರಾಜು ಸೇರಿದಂತೆ ಕೆಲವು ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪಿ. ಮಹೇಶ್ ಕಾನೂನಡಿ, ತಮ್ಮ ಕಾರ್ಯ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಐದಾರು ತಿಂಗಳಿನಿಂದ ಪಂಚಾಯಿತಿಗೆ ಕಾಯಂ ಪಿಡಿಒ ನಿಯೋಜನೆಯಾಗದೇ ಕೆಲಸ ಕಾರ್ಯಗಳು ಕುಂಠಿತಗೊಂಡಿದ್ದವು. ತಿಂಗಳ ಹಿಂದೆಯಷ್ಟೆ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗೆ ಹಿಂದಿನ ದಾಖಲೆಗಳಿಲ್ಲದ ಕಾಮಗಾರಿಗಳ ಬಿಲ್ಲನ್ನು ನೀಡುವಂತೆ ಸದಸ್ಯರು ಒತ್ತಡ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಗ್ರಾಪಂ ಸದಸ್ಯರಾದ ಟಿ.ಎನ್. ಶಿವಕುಮಾರ್, ಸೋಮಶೇಖರ್, ಪ್ರಕಾಶ್, ರೇಣುಕಾಮೂರ್ತಿ, ಹೇಮಂತ್ಕುಮಾರ್, ದಾಮೂರ್ತಿ ಇದ್ದರು. ಪ್ರತಿಭಟನೆ ಸುದ್ಧಿ ತಿಳಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆ. ಕೃಷ್ಣ ಗ್ರಾಪಂ ಕಚೇರಿಗೆ ಆಗಮಿಸಿ ಎರಡು ಬಣದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.