ಸುತ್ತೂರು ಜೆಎಸ್ಎಸ್ನಲ್ಲಿ ಗಾಂಧಿ ಜಯಂತಿ ಆಚರಣೆ
ಸುತ್ತೂರು: ಜೆಎಸ್ಎಸ್ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ, ಶಿಕ್ಷಕರ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಹಿರಿಯರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಮೈವಿವಿ ಸಿಪಿಡಿಪಿಎಸ್ ನಿರ್ದೇಶಕ ಪ್ರೊ. ನಿರಂಜನ ವಾನಳ್ಳಿ ಮಾತನಾಡಿ, ಗಾಂಧಿ ಮಾರ್ಗದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಅಧಿಕಾರಕ್ಕಾಗಿ ಹಂಬಲಿಸದ ಗಾಂಧೀಜಿ ನಿಸ್ವಾರ್ಥ ದೇಶಪ್ರೇಮಿಯಾಗಿ ರೂಪುಗೊಂಡರು. ಅವರ ವ್ಯಕ್ತಿತ್ವ ಎಂದೆಂದಿಗೂ ಮಾದರಿಯಾದುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ. ಮಾದೇಗೌಡ ಮಾತನಾಡಿ, ಸತ್ಯ, ಅಹಿಂಸೆ, ಗಾಂಧೀಜಿಯ ತತ್ವದ ಮೂಲ ಮಂತ್ರಗಳು. ಸರ್ವೋದಯವೇ ಗಾಂಧೀಜಿಯವರ ಆಶಯವಾಗಿತ್ತು ಎಂದು ಹೇಳಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಶಿವಮಲ್ಲು ಅತಿಥಿಯಾಗಿದ್ದರು. ಡಿ.ಎಸ್. ವೀಣಾ ಪ್ರಾರ್ಥಿಸಿದರು. ಜೆಎಸ್ಎಸ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ. ನಟರಾಜು ಸ್ವಾಗತಿಸಿದರು.
ಬೈಲುಕುಪ್ಪೆಯಲ್ಲಿ ಗಾಂಧಿ ಜಯಂತಿ
ಬೈಲುಕುಪ್ಪೆ: ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸದುಪಯೋಗ ಪಡಿಸಿಕೊಂಡು ಹಳ್ಳಿಗಳ ಅಭಿವೃದ್ಧಿಪಡಿಸುವಂತೆ ಗ್ರಾಪಂ ಅಧ್ಯಕ್ಷ ರವಿಮಾನು ಹೇಳಿದರು. ಗಾಂಧಿ ಜಯಂತಿಯ ಅಂಗವಾಗಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಯ ತಿರುಮಲಾಪುರ ಗ್ರಾಮದ ಹೊಸಕೆರೆ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ, ದನಕರುಗಳಿಗೆ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದು ತಿಳಿಸಿದರು. ಇದೆ ವೇಳೆ ಸದಸ್ಯರಾದ ರಾಜು, ಮಹದೇವ, ಗಣೇಶ, ಪಿಡಿಒ ಶಿವಯೋಗ, ಸಿಬ್ಬಂದಿ ವರ್ಗದವರಾದ ರಾಮಚಂದ್ರು, ರಾಮಕೃಷ್ಣ, ಕೃಷ್ಣ, ಮಂಜು, ಸ್ವಾಮಿ ಇದ್ದರು.
ಅಕ್ರಮ ಮದ್ಯ ಮಾರಾಟ
ಪಿರಿಯಾಪಟ್ಟಣ: ಗಾಂಧಿ ಜಯಂತಿಯಂದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು, ನಾಲ್ಕು ಸಾವಿರ ಬೆಲೆ ಬಾಳುವ ಮದ್ಯ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಸಂತೆ ಮಾಳದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪಪಂ ಮಳಿಗೆಯಲ್ಲಿ ಹಾಗೂ ಪಟ್ಟಣದ ಉಪ್ಪಾರಗೇರಿಯ ಬಾರ್ ಒಂದರ ಹಿಂಭಾಗ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.