'ಗಾಂಧಿ ಪತ್ರಿಕೋದ್ಯಮ ಆದರ್ಶವಾಗಲಿ'
ಕ.ಪ್ರ.ವಾರ್ತೆ ಮೈಸೂರು ಅ. 3
ಪತ್ರಿಕೆಗಳು ಸತ್ಯನಿಷ್ಠ ವರದಿ, ಲೇಖನಗಳನ್ನು ಪ್ರಕಟಿಸುವ ಮೂಲಕ ಸಮಾಜದ ಎಲ್ಲ ಜನರ ಅಭಿಪ್ರಾಯಗಳನ್ನು ರೂಪಿಸುವಂತಿರಬೇಕು ಎಂದು ಮಹಾತ್ಮ ಗಾಂಧೀಜಿ ಯಾವಾಗಲೂ ಪತ್ರಿಪಾದಿಸುತ್ತಿದ್ದರು ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಎನ್. ಉಷಾರಾಣಿ ಹೇಳಿದರು.
ವಾರ್ತಾ ಇಲಾಖೆ ವತಿಯಿಂದ ವಾರ್ತಾ ಭವನದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಪತ್ರಿಕೋದ್ಯಮ ಕುರಿತು ಅವರು ಮಾತನಾಡಿದರು.
ಸತ್ಯದ ಪ್ರತಿಪಾದಕರಾದ ಗಾಂಧೀಜಿಯವರು ಸದುದ್ದೇಶದ ಗುರಿ ಹೊಂದಿದ ವರದಿ ಹಾಗೂ ಲೇಖನಗಳನ್ನು ಬರೆಯುವ ಹಾಗೂ ಜನರ ಟೀಕೆ, ಟಿಪ್ಪಣಿಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಒಬ್ಬ ಮಾದರಿ ಪತ್ರಕರ್ತರಾಗಿದ್ದರು. ಜಾಹೀರಾತು ಪತ್ರಿಕೆಗಳ ಜೀವಾಳವಾಗಬಾರದು. ಬದಲಾಗಿ ಜನರು ಪತ್ರಿಕೆಗಳ ಚಂದಾದಾರರಾಗುವ ಮೂಲಕ ಪತ್ರಿಕೆಗಳನ್ನು ಮುನ್ನಡೆಸಬೇಕು. ಎಂದಿಗೂ ಪತ್ರಿಕೆಗಳು ಬಂಡವಾಳಶಾಹಿಗಳ ಹಾಗೂ ಯಾವುದೆ ಸರ್ಕಾರಗಳ ಹಿಡಿತದಲ್ಲಿರಬಾರದು ಎಂಬುದನ್ನು ಹೇಳುತ್ತಿದ್ದರು. ಅದರಂತೆ ಅವರು ತಮ್ಮ ಯಂಗ್ ಇಂಡಿಯಾ, ಹರಿಜನ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು ಎಂದು ತಿಳಿಸಿದರು.
ಗಾಂಧೀಜಿಯವರು ಮಾಧ್ಯಮದ ಮೂಲಕ ಜನರನ್ನು ತಲುಪುವ ಜೊತೆಗೆ ತಾವೇ ಒಂದು ಮಾಧ್ಯಮವೇ ಆಗಿದ್ದರು. ಇಂದಿನ ಪತ್ರಿಕೋದ್ಯಮ ಮಹಾತ್ಮ ಗಾಂಧೀಜಿಯವರ ಮಾದರಿ ಪತ್ರಿಕೋದ್ಯಮವನ್ನು ಒಪ್ಪಿ ಅದರಂತೆ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.
ಜಿ.ಎನ್.ಮಂಜುನಾಥ್ ಅವರು ಗಾಂಧೀ ಸ್ಮೃತಿ ವಾಚಿಸಿದರು, ಮೈಸೂರಿನ ನಾಟ್ಯ ಸಂಗೀತಾಲಯ ಸಂಶೋಧನಾ ವಿದ್ಯಾರ್ಥಿಗಳಿಂದ ಗಾಂಧೀಜಿಯವರಿಗೆ ಪ್ರಿಯವಾದ ಭಜನೆಗಳನ್ನು ಹಾಗೂ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಸ್ವಾಗತಿಸಿದರು.