ಘರ್ಷಣೆ ಬಿಡಿಸ ಹೋದ ಪೊಲೀಸರ ಮೇಲೇ ಕಲ್ಲು
ಕ.ಪ್ರ.ವಾರ್ತೆ ಗುಂಡ್ಲುಪೇಟೆ ಅ. 3
ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಎರಡು ಜನಾಂಗದ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಪೊಲೀಸರು ಒಂದು ಜನಾಂಗದ ಪರವಾಗಿದ್ದಾರೆ ಎಂದು ಇನ್ನೊಂದು ಕೋಮಿನ ಜನರು ಪೊಲೀಸರ ಮೇಲೆ ಕಲ್ಲು ತೂರಿದ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ 6 ಪೊಲೀಸರಿಗೆ ಗಾಯಗಳಾಗಿವೆ.
ಪೊಲೀಸ್ ಇಲಾಖೆಗೆ ಸೇರಿದ ನಾಲ್ಕು ವಾಹನಗಳಿಗೆ ಕಲ್ಲು ತೂರಿದ್ದರಿಂದ ವಾಹನಗಳ ಗಾಜುಗಳು ಪುಡಿಯಾಗಿವೆ. ಸರ್ಕಲ್ ಇನ್ಸ್ಪೆಕ್ಟರ್ ಚನ್ನೇಶ ಗಾಯಗೊಂಡಿದ್ದು, ಡಿಆರ್ನ ಮುಖ್ಯಪೇದೆ ರಂಗಸ್ವಾಮಿಗೆ ಮೂಳೆ ಮುರಿದಿದೆ. ಪೊಲೀಸ್ ವಾಹನಗಳು ಜಖಂಗೊಂಡಿವೆ.
ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ ನಂತರ ಪರಿಸ್ಥಿತಿ ಹತೋಟಿಗೆ ಬಂದಿದೆ. ಗ್ರಾಮದ ಒಂದು ಗುಂಪಿನ ಸುಮಾರು 300ಕ್ಕೂ ಹೆಚ್ಚು ಮಂದಿಯ ವಿರುದ್ಧ ಕೇಸು ದಾಖಲಾಗಿದೆ.
ಮುಂಜಾಗೃತಾ ಕ್ರಮವಾಗಿ ಗ್ರಾಮದ 31 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ಮಾಡಲಾಗಿದೆ. ಡಿವೈಎಸ್ಪಿ ಮುತ್ತುಸ್ವಾಮಿನಾಯ್ಡು ನೇತೃತ್ವದಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ.
ಏನಿದು ಗಲಾಟೆ?: ಬುಧವಾರ ಸಂಜೆ ಉಪ್ಪಾರ ಸಮುದಾಯ ಹಾಗೂ ಪರಿಶಿಷ್ಟ ಸಮುದಾಯದ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಯಿತು. ನಾಗಮಲ್ಲು ಗ್ರಾಮದಲ್ಲಿರುವ ಬಹುಸಂಖ್ಯಾತರು ನಮ್ಮ ಮೇಲೆ ಗಲಾಟೆ ನಡೆಸುತ್ತಿದ್ದಾರೆ ಎಂದು ಗುರುವಾರ ಬೆಳಗ್ಗೆ ಗುಂಡ್ಲುಪೇಟೆ ಠಾಣೆಗೆ ಪರಿಶಿಷ್ಟರು ಪೋನಾಯಿಸಿದ್ದಾರೆ.
ಈ ವಿಚಾರ ಅರಿತು ಉಪ್ಪಾರರು ಗ್ರಾಮದ ಮುಂದೆ ಒಂದು ಗುಂಪು ಸೇರಿದ್ದರು. ಆ ವೇಳೆಗೆ ಪೊಲೀಸರು ಗ್ರಾಮಕ್ಕೆ ಬಂದು ಗುಂಪು ಕಟ್ಟಿಕೊಳ್ಳಬಾರದು ಎಂದು ಹೇಳಿದ್ದೇ ತಡ, ಮೊದಲೇ ಆಕ್ರೋಶಗೊಂಡಿದ್ದ ಉಪ್ಪಾರ ಜನಾಂಗದ ಕಿಡಿಗೇಡಿಗಳು ಪೊಲೀಸರತ್ತ ಕಲ್ಲು ತೂರಿದ್ದಾರೆ.
ಪುರುಷರೊಂದಿಗೆ ಮಹಿಳೆಯರು ಸೇರಿಕೊಂಡು ದಲಿತ ಸಮುದಾಯದ ಮನೆಗಳ ಮೇಲೆ, ಪೊಲೀಸರತ್ತ ಕಲ್ಲು, ಕಾರದ ಪುಡಿ ಎರಚಲು ಶುರು ಮಾಡಿದರು.
ಸ್ಥಳಕ್ಕಾಗಮಿಸಿದ ಇನ್ಸ್ಪೆಕ್ಟರ್ ಚನ್ನೇಶ್, ಒಂದು ಕೆಎಸ್ಆರ್ಪಿ ತುಕಡಿ, 2 ಡಿಎಆರ್ ತುಕಡಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಗಲಭೆಕೋರರನ್ನು ನಿಯಂತ್ರಿಸಲು ಲಾಠಿ ಚಾರ್ಚ್ ಮಾಡಿದರು. ಅದಕ್ಕೂ ಗಲಭೆಕೋರರು ನಿಯಂತ್ರಣಕ್ಕೆ ಬಾರದಿದ್ದಾಗ ಅಶ್ರುವಾಯು ಸಿಡಿಸಿದರು. ನಂತರ ಗ್ರಾಮದ ಬೀದಿಯಲ್ಲಿ ಮಹಿಳೆಯರು ಮಕ್ಕಳೆನ್ನದೆ ಪೊಲೀಸರು ಮನಸೋಯಿಚ್ಛೆ ಲಾಠಿ ರುಚಿ ತೋರಿಸಿದರು.
ಕಲ್ಲು ತೂರಾಟದಲ್ಲಿ ಸಿಐ ಚನ್ನೇಶ್, ಪಿಎಸ್ಐ ಎಂ.ನಾಯಕ್ ಹಾಗೂ 6 ಮಂದಿ ಪೊಲೀಸರಿಗೆ ಕಲ್ಲಿನ ಏಟು ಬಿದ್ದಿದೆ. ಗ್ರಾಮದಲ್ಲಿ 144 ಸೆಕ್ಷನ್ ಅನ್ವಯ 1 ವಾರಗಳ ಕಾಲ ನಿಷೇದಾಜ್ಞೆ ಹೊರಡಿಸಿದ್ದಾರೆ.
ಗ್ರಾಮದಲ್ಲಿ ಈಗ ಶಾಂತಿ ನೆಲಸಿದ್ದು, ಡಿವೈಎಸ್ಪಿ ಮುತ್ತುಸ್ವಾಮಿನಾಯ್ಡು ನೇತೃತ್ವದಲ್ಲಿ ಖಾಕಿ ಪಹರೆ ಹಾಕಲಾಗಿದೆ. ಎತ್ತ ನೋಡಿದರೂ ಖಾಕಿಮಯವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಎಸ್ಪಿ ಭೇಟಿ: ಭೀಮನಬೀಡು ಗ್ರಾಮದಲ್ಲಿ ಎರಡು ಜನಾಂಗದ ನಡುವೆ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ಎಸ್ಪಿ ರಾಜೇಂದ್ರಪ್ರಸಾದ್, ತಹಸೀಲ್ದಾರ್ ರಂಗನಾಥ್ ಗ್ರಾಮಕ್ಕೆ ಭೇಟಿ ಪರಿಸ್ಥಿತಿ ಅವಲೋಕಿಸಿದರು.
2 ಕೆಎಸ್ಆರ್ಪಿ ತುಕಡಿ, 4 ಡಿಎಆರ್ ಹಾಗೂ 1 ಕಮಾಂಡೋ ತುಕಡಿ ಮತ್ತು ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, 4 ಮಂದಿ ಪಿಎಸ್ಐ, ಡಿವೈಎಸ್ಪಿ ಅವರು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.