ತರಕಾರಿ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ
ಕ.ಪ್ರ.ವಾರ್ತೆ ನಂಜನಗೂಡು ಅ. 3
ಇಲ್ಲಿಗೆ ಸಮೀಪದ ದೇಬೂರು ಗ್ರಾಮದ ಪ್ರಗತಿಪರ ರೈತ ಚಿಕ್ಕೀರಯ್ಯ ಅವರ ಜಮೀನಿನಲ್ಲಿ ತರಕಾರಿ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಎಂ.ಎಸ್. ಈಶ್ವರ್ ಮಾತನಾಡಿ, 2013 -2014 ನೇ ಸಾಲಿನಲ್ಲಿ ರೈತರಿಗೆ 50 ರೈತಕ್ಷೇತ್ರ ಪಾಠಶಾಲೆ ಹಮ್ಮಿಕೊಳ್ಳಲಾಗಿದೆ. ಪುರುಷರು ಮತ್ತು ಸ್ವಸಹಾಯ ಸಂಘ ಸದಸ್ಯರಿಗೆ ಸ್ವ-ಉದ್ಯೋಗ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರೈತರು ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಕೆ.ಕುಸುಗಲ್ ತರಕಾರಿ ಕೃಷಿ ಬಗ್ಗೆ ಮಾಹಿತಿ ನೀಡಿದರು. ನಂಜನಗೂಡು ಎ ವಲಯದ ಮೇಲ್ವಿಚಾರಕಿ ಅನಿತಾ, ಗ್ರಾಪಂ ಸದಸ್ಯರು, ಸೇವಾ ಪ್ರತಿನಿಧಿ ಮಂಜುಳ ಮತ್ತು ಸ್ವಸಹಾಯ ಪ್ರಗತಿ ಬಂಧು ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುಷ್ಪಕೃಷಿ: ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುಷ್ಪಕೃಷಿ ಕುರಿತು ರೈತರಿಗೆ ಒಂದು ದಿನದ ತರಬೇತಿ ನಡೆಯಿತು. ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಕೆ. ಕುಸುಗಲ್ ಪುಷ್ಪ ಕೃಷಿ ವೈಜ್ಞಾನಿಕ ಬೆಳೆ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಪುಷ್ಪಕೃಷಿ ಲಾಭದಾಯಕ ಕೃಷಿ ಆಗಿದ್ದು, ರೈತರು ವಿವಿಧ ಜಾತಿಯ ಬಣ್ಣ ಬಣ್ಣದ ಹೂಗಳನ್ನು ಬೆಳೆದು ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಸುತ್ತೂರು ವಲಯದ ಮೇಲ್ವಿಚಾರಕ ಜಯಲಕ್ಷ್ಮಿ ಮತ್ತು ಗ್ರಾಮದ ಸೇವಾ ಪ್ರತಿನಿಧಿ ನಾಗರತ್ನ, ಪ್ರಗತಿಬಂಧು ತಂಡದ ಸದಸ್ಯರು ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.