ನಾಲ್ವಡಿ ನೆನಪು ಛಾಯಾಚಿತ್ರ ಪ್ರದರ್ಶನ
ಮೈಸೂರು: ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ವಸ್ತು ಪ್ರದರ್ಶನ ಆವರಣದ ಕಚೇರಿಯಲ್ಲಿ ಮೈಸೂರು ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಒಂದು ನೆನಪು ಶೀರ್ಷಿಕೆಯಡಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.ವರ್ಷವಿಡಿ ಪ್ರದರ್ಶನಗೊಳ್ಳುವ ಈ ಪ್ರದರ್ಶನದಲ್ಲಿ ನಾಲ್ವಡಿ ಅವರ ತಾಯಿ, ತಂದೆ, ಹುಟ್ಟು, ಬಾಲ್ಯ, ವಿದ್ಯಾಭ್ಯಾಸ, ಉಪನ ಯನ, ಪಟ್ಟಾಭಿಷೇಕ, ಆಡಳಿತ ವ್ಯವಸ್ಥೆ, ಸುವರ್ಣ ವರ್ಷಾಚರಣೆ, ನೆನಪಿನ ಸೌಧಗಳು, ಅರಮನೆಗಳು, ದೊಡ್ಡ ಗಡಿಯಾರ, ವಿಶ್ವವಿದ್ಯಾಲಯ, ನೀರಾವರಿ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ, ಪ್ರವಾಸ, ನಾಲ್ವಡಿಯವರ ಅಂತಿಮ ಯಾತ್ರೆ ಹಾಗೂ ಅವರ ಸ್ಮಾರಕವಾಗಿ ಕೆ.ಆರ್. ವೃತ್ತ ನಿರ್ಮಾಣ ಮುಂತಾದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಪರಂಪರೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯಚಿತ್ರ ಪ್ರದರ್ಶನವು ಪ್ರತಿದಿನ ಸಂಜೆ 6, 7 ಮತ್ತು ರಾತ್ರಿ 8ಕ್ಕೆ ಇರುತ್ತದೆ. ಕಾರ್ಯಕ್ರಮ ಅಂಗವಾಗಿ ಮೂರು ಹೊಸ ಗ್ಯಾಲರಿ ತೆರೆಯಲಾಗಿದೆ. ಮೊದಲ ಗ್ಯಾಲರಿಯಲ್ಲಿ ರಾಜ ಮನೆತನದ ಅಮೂಲ್ಯ ಛಾಯಾಚಿತ್ರ ಪ್ರದರ್ಶನ, 2ನೇ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ವರ್ಣಚಿತ್ರ ಹಾಗೂ 3ನೇ ಗ್ಯಾಲರಿಯಲ್ಲಿ ಉತ್ಖನನದಲ್ಲಿ ದೊರೆತ ಪುರಾತತ್ವ ಅವಶೇಷ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಇಲಾಖೆಯಲ್ಲಿನ ಸುಮಾರು 140ಕ್ಕೂ ಹೆಚ್ಚು ಸಂಶೋಧನಾತ್ಮಕ ಪುಸ್ತಕ ಪ್ರಕಟಿಸಲಾಗಿದೆ. ಅವುಗಳನ್ನು ಶೇ.15 ರಿಂದ 50ರವರೆಗಿನ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರಮಠ ತಿಳಿಸಿದ್ದಾರೆ.