ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೀರಾವರಿ ಸೌಲಭ್ಯವಿಲ್ಲದ ಪ್ರದೇಶ ಅಭಿವೃದ್ಧಿಗೆ ಆದ್ಯತೆ: ವೆಂಕಟೇಶ್

Rashmi Kasaragodu
Updated On : 4 Oct 2013, 1:12 am

ಕ.ಪ್ರ.ವಾರ್ತೆ   ಪಿರಿಯಾಪಟ್ಟಣ   ಅ. 3
ತಾಲೂಕಿನಲ್ಲಿ ನೀರಾವರಿಗೆ ಒಳಪಡದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಚಿಟ್ಟೇನಹಳ್ಳಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ತಮ್ಮದೇ ಆದ ಸರ್ಕಾರ ಅಧಿಕಾರದಲ್ಲಿರದ ಕಾರಣ, ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ತಮ್ಮದೆ ಸರ್ಕಾರ ಅಧಿಕಾರದಲ್ಲಿದ್ದು, ಕ್ಷೇತ್ರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದ್ದು, ಈ ಬಗ್ಗೆ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು. ಶೌಚಾಲಯ ಇಲ್ಲದವರೆಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಬಹುದಾಗಿದ್ದು ಸರ್ಕಾರ ಶೌಚಾಲಯ ನಿರ್ಮಾಣದ ಬಗ್ಗೆ ಪಂಚಾಯಿತಿವಾರು ಯಾವುದೆ ಮಿತಿ ನಿಗದಿಪಡಿಸಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಬಯಸುವ ಎಲ್ಲಾ ಅರ್ಹ ಫಲಾನುಭವಿಗಳಿಗೂ ಅನುದಾನ ನೀಡಲಿದೆ ಎಂದು ಹೇಳಿದರು. ಇದೆ ವೇಳೆ ಪಂಚಾಯಿತಿ ವ್ಯಾಪ್ತಿಯ 11 ಅಂಗನವಾಡಿ ಕೇಂದ್ರಗಳಿಗೂ ಗ್ರಾಪಂ ವತಿಯಿಂದ ತಾಪಂ ಸದಸ್ಯೆ ಶೈಲಜಾ ಸೊಳ್ಳೆಪರದೆ ವಿತರಿಸಿದರು.
ಕಂಪಲಾಪುರ ಸಭೆ: ಕಂಪಲಾಪುರ ಗ್ರಾಮಕ್ಕೆ ಬಿಸಿಎಂ ಹಾಸ್ಟೆಲ್, ಪದವಿ ಪೂರ್ವ ಕಾಲೇಜು ಹಾಗೂ ರಸ್ತೆ ಮತ್ತು ಚರಂಡಿ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಎಂ.ಕೆ. ಸವಿತಾ ಮಾತನಾಡಿ, ನೆಮ್ಮದಿ ಕೇಂದ್ರಗಳ ಬದಲಾಗಿ ಎಲ್ಲ ಹೋಬಳಿ ಕೇಂದ್ರಗಳಲ್ಲಿಯೂ ಅಟಲ್ಜಿ ಜನಸ್ನೇಹಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೆ ನಾಡ ಕಚೇರಿಗಳಿದ್ದು, ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಅಲ್ಲಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಇಒ ಮಹದೇವಸ್ವಾಮಿ, ಕಂಪಲಾಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ಚಂದ್ರು, ಪ್ರಧಾನ ಕಾರ್ಯದರ್ಶಿ ನಿಲಂಗಾಲ ಜಯಣ್ಣ, ಎಪಿಎಂಸಿ ನಿರ್ದೇಶಕ ರಾಜಶೇಖರ್, ಎಇಇಗಳಾದ ಸಿ.ಸಿ. ಮನೋಹರ್, ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಉಪತಹಸೀಲ್ದಾರ್ ಸಣ್ಣರಾಮಪ್ಪ, ಆರ್ಎಫ್ಒ ಎಂ.ಎಸ್. ಚಿಣ್ಣಪ್ಪ, ಬಿಒ ರಾಮಲಿಂಗು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement