ಸಾಕ್ಷರತಾ ಜಾಗೃತಿ ಜಾಥಾಗೆ ಚಾಲನೆ
ಟಿ. ನರಸೀಪುರ: ಅಕ್ಷರದ ಅರಿವಿಲ್ಲದವರಿಗೆ ಅಕ್ಷರ ಕಲಿಸಿದಾಗ ಸಾಕ್ಷರತಾ ಕಾರ್ಯಕ್ರಮ ತಾಲೂಕಿನಲ್ಲಿ ಯಶಸ್ವಿಗೊಳ್ಳುತ್ತದೆ ಎಂದು ತಾಪಂ ಅಧ್ಯಕ್ಷ ತುಂಬಲ ಅಂದಾನಿ ಹೇಳಿದರು.ತಾಪಂ ಆವರಣದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿರುವ ಅನಕ್ಷರಸ್ಥರಿಗೆ ಬಿಡುವಿನ ವೇಳೆಯಲ್ಲಿ ಓದು ಬರಹ ಕಲಿಸುವ ಕಾರ್ಯ ಸಾಕ್ಷರ ಭಾರತ್ ಪ್ರೇರಕರು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ. ಶಂಕರೇಗೌಡ ಮಾತನಾಡಿದರು. ತಾಪಂ ಆವರಣದಿಂದ ಆರಂಭವಾದ ಜಾಗೃತಿ ಜಾಥಾ ತಾಪಂಗೆ ಮರಳಿತು. ಜಾಥಾದಲ್ಲಿ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಮತ್ತು ಸಾಕ್ಷರ ಭಾರತ್ ಪ್ರೇರಕರು ಭಾಗವಹಿಸಿದ್ದರು.ತಾಪಂ ಸದಸ್ಯ ಗುರುಮೂರ್ತಿ, ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ತೇ.ಸೀ. ವಿಶ್ವೇಶ್ವರಯ್ಯ, ಜಿಲ್ಲಾ ಸಂಯೋಜಕ ಮಂಜುನಾಥ್, ಬಿ. ನಾಗಮ್ಮ, ಬಿ.ಶಶಿಧರ, ಕಮಲಾಕ್ಷಿ, ಸಾಕ್ಷರ ಪ್ರೇರಕ ಕುಮಾರಸ್ವಾಮಿ, ಸಿದ್ದೇಶ್, ಗವಿಸಿದ್ದಯ್ಯ ಇದ್ದರು.
ಬಿಜೆಪಿ ಸಂಘಟನೆಗೆ ಒತ್ತು
ಕೆ.ಆರ್. ನಗರ: ತಾಲೂಕು ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸುವುದಾಗಿ ತಾಲೂಕು ಘಟಕದ ನೂತನ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಹೇಳಿದರು.ಪಕ್ಷದ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರು ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.