ಆಕಾಶವಾಣಿ ವಿಶೇಷ ಕಾರ್ಯಕ್ರಮ
ಕ.ಪ್ರ.ವಾರ್ತೆ ಮೈಸೂರು ಅ. 4
ನಾಡಹಬ್ಬ ದಸರಾ ಪ್ರಯುಕ್ತ ಆಕಾಶವಾಣಿ ಮೈಸೂರು ಕೇಂದ್ರವು ಅ.5 ರಿಂದ 14 ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಈ ಒಂಬತ್ತು ದಿನಗಳ ಬೆಳಗ್ಗೆ 6.10 ರಿಂದ 6.30 ರವರೆಗೆ ದಸರಾ ವಿಶೇಷ ಗೀತಾರಾಧನೆ, ಬೆಳಗ್ಗೆ 6.30ಕ್ಕೆ ದಸರಾ ವಿಶೇಷ ಚಿಂತನ ಕಾರ್ಯಕ್ರಮವನ್ನು ವಿದ್ವಾನ್ ವಿ. ನಂಜುಂಡಸ್ವಾಮಿ ನಡೆಸಿಕೊಡುವರು. ಅ.13 ರವರೆಗೆ ಬೆಳಗ್ಗೆ 8.40ಕ್ಕೆ ಅರಮನೆ ಸಂಗೀತ ವೈಭವ- ಕರ್ನಾಟಕ ಸಂಗೀತಕ್ಕೆ ಮೈಸೂರು ಅರಸರ ಕೊಡುಗೆ ಕುರಿತ ಕಾರ್ಯಕ್ರಮ, ಬೆಳಗ್ಗೆ 9ಕ್ಕೆ ನಮಸ್ತುಭ್ಯಂ ವಿಶೇಷ ರೂಪಕ ಸರಣಿ ಹಾಗೂ ಅ.5 ರಂದು ಡಾ.ಆರ್.ಎನ್. ಶ್ರೀಲತಾ ರಚನೆಯ ಮಹಿಷ ಮರ್ದಿನಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಅ.9 ರಿಂದ 13 ರವರೆಗೆ ನಾಡಿನ ಖ್ಯಾತ ವ್ಯಕ್ತಿಗಳು ಪಾಲ್ಗೊಂಡಿರುವ ದಸರಾ ವಿಶೇಷ ಸಂಜೆ ಮಲ್ಲಿಗೆ ಕಾರ್ಯಕ್ರಮ, ದಸರಾ ಉದ್ಘಾಟನೆಯ ಬಾನುಲಿ ವರದಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.