ರಾಜವಂಶಸ್ಥರ ಖಾಸಗಿ ದರ್ಬಾರ್
ಕ.ಪ್ರ.ವಾರ್ತೆ ಮೈಸೂರು ಅ. 4
ದಸರಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಶನಿವಾರ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಆರಂಭವಾಗಲಿದೆ.
ಅರಮನೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಎಣ್ಣೆಶಾಸ್ತ್ರ, ಮಂಗಳ ಸ್ನಾನ, ಸಿಂಹಾಸನಕ್ಕೆ ಸಿಂಹ ಜೋಡಣೆ, ಕ್ರಮವಾಗಿ ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮತ್ತು ವಾಣಿವಿಲಾಸ ಅರಮನೆಯಲ್ಲಿ ಪತ್ನಿ ಪ್ರಮೋದಾದೇವಿ ಅವರಿಗೆ ಕನಕಧಾರಣೆ, ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಹಸುಗಳ ಆಗಮನ, ದರ್ಬಾರ್ ಹಾಲ್ನಲ್ಲಿ ನವಗ್ರಹ ಕಳಸ ಪೂಜೆ ಮತ್ತು ಸಿಂಹಾಸನ ರೋಹಣ, ಕನ್ನಡಿ ತೊಟ್ಟಿಗೆ ಶ್ರೀಚಾಮುಂಡೇಶ್ವರಿ ತರುವುದು ಮೊದಲಾದ ವಿಧಿ ವಿಧಾನಗಳು ನೆರವೇರಲಿವೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪಾದಪೂಜೆಯನ್ನು ಪತ್ನಿ ಪ್ರಮೋದಾ ದೇವಿ ನೆರವೇರಿಸುವರು.
ರಾಜ ಸಂಪ್ರದಾಯದಂತೆ ದರ್ಬಾರ್ ಹಾಲ್ಗೆ ಆಗಮಿಸುವ ಒಡೆಯರ್ ಅವರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್ ಮೊಳಗಲಿದೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಿತ್ಯ ಸಂಜೆ ರಾಜಪೋಷಾಕಿನಲ್ಲಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸುವರು. ಇದೇ ಸಂದರ್ಭದಲ್ಲಿ ವಿವಿಧ ಪೂಜೆ ಪುನಸ್ಕಾರಗಳು ನಡೆಯುತ್ತವೆ