ಸ್ವಚ್ಛತೆಗೆ ಸಹಕರಿಸಿ: ವಾಸು
ಕ.ಪ್ರ.ವಾರ್ತೆ ಮೈಸೂರು ಅ. 4
ಪ್ರತಿಯೊಬ್ಬ ನಾಗರಿಕರು ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ಮನವಿ ಮಾಡಿದರು.
ದಸರಾ ವ್ಯವಸ್ಥೆ ಮತ್ತು ಸ್ವಚ್ಛತಾ ಉಪಸಮಿತಿಯು ದೇವರಾಜ ಮಾರುಕಟ್ಟೆ ಮುಂಭಾಗದಲ್ಲಿನ ಚಿಕ್ಕಗಡಿಯಾರದ ಉದ್ಯಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರಮದಾನ ಮತ್ತು ಶುಚಿತ್ವ ಜಾಗೃತ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರ ಈಗಾಗಲೇ ದೇಶದ ಎರಡನೇ ಸ್ವಚ್ಛತಾ ನಗರವೆಂಬ ಕೀರ್ತಿಗೆ ಪಾತ್ರವಾಗಿದೆ. ಇಂತಹ ಸುಂದರ ನಗರ ಹಾಗೂ ಪ್ರವಾಸಿಗರ ತಾಣವೂ ಆಗಿರುವ ಮೈಸೂರಿನ ಶುಚಿತ್ವ ಕಾಪಾಡುವಲ್ಲಿ ನಗರ ಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಕೇವಲ ದಸರಾ ಸಂದರ್ಭದಲ್ಲಿ ಮಾತ್ರ ನಗರದ ಸ್ವಚ್ಛತೆಗೆ ಆದ್ಯತೆ ನೀಡಿದರೆ ಸಾಲದು. ಇದು ನಾಡಹಬ್ಬ ಮುಗಿದ ನಂತರವೂ ಇದು ಹೀಗೆ ಮುಂದುವರಿಯಬೇಕು. ಇದರಿಂದ ನಗರದ ಸೌಂದರ್ಯ ಹೆಚ್ಚಿಸುವಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಆಶಿಸಿದರು.
ಕೆ.ಆರ್. ವೃತ್ತದ ಮೂಲಕ ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿ ದಸರಾ ಜಂಬೂಸವಾರಿ ತೆರಳುವುದರಿಂದ ಹೆಚ್ಚಿನ ಸ್ವಚ್ಛತೆಗೆ ಗಮನ ಹರಿಸಬೇಕು. ಅಂತೆಯೇ ನಗರದ ವಿವಿಧ ಭಾಗಗಳಲ್ಲಿ ಶುಚಿತ್ವ ಕಾಪಾಡುವ ಸಂಬಂಧ ವಿಧಾನಸಭಾ ಕ್ಷೇತ್ರವಾರು ಉಪಸಮಿತಿಗಳನ್ನು ರಚಿಸುವ ಅಗತ್ಯವಿದೆ ಎಂದರು.
ತ್ಯಾಜ್ಯ ಬಿಸಾಡದಂತೆ ಮನವಿ: ನಂತರ ದೇವರಾಜ ಮಾರುಕಟ್ಟೆ ಹಾಗೂ ಸುತ್ತಮುತ್ತ ಇರುವ ಮಳಿಗೆಗಳಿಗೆ ಮತ್ತು ರಸ್ತೆಬದಿ ಹಣ್ಣಿನ ವ್ಯಾಪಾರಿಗಳಿಗೆ ಭಿತ್ತಿಪತ್ರ ವಿತರಿಸಿ, ಯಾವುದೇ ತ್ಯಾಜ್ಯವನ್ನು ಬೀದಿಯಲ್ಲಿ ಬಿಸಾಡದೆ, ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಶುಚಿತ್ವ ಕಾಪಾಡಿ, ನಗರದ ಸೌಂದರ್ಯ ಹಾಗೂ ಸಾರ್ವಜನಿಕರ ಹಿತ ಕಾಪಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ ಸಂತೇಪೇಟೆ ಪುರಾತನ ನಂಜುಂಡೇಶ್ವರ ದೇವಸ್ಥಾನದ ಸ್ಥಿತಿಗತಿ, ತಾತಯ್ಯ ಉದ್ಯಾನದ ಬಳಿ ಹಾಗೂ ಲ್ಯಾನ್ಸ್ಡೌನ್ ಕಟ್ಟಡದ ಹಿಂಭಾಗ ಮಲಮೂತ್ರ ವಿರ್ಸಜಿಸುವ ಹಾಗೂ ತ್ಯಾಜ್ಯ ಬಸಾಡಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಸಿ.ಶಿಖಾ, ನಗರ ಪಾಲಿಕೆ ಆಯುಕ್ತ ಹಾಗೂ ಉಪವಿಶೇಷಾಧಿಕಾರಿ ಪಿ.ಜಿ. ರಮೇಶ್, ನಗರ ಪಾಲಿಕೆ ಸದಸ್ಯರಾದ ಎಂ.ಜೆ. ರವಿಕುಮಾರ್, ಟಿ. ಗಿರೀಶ್ ಪ್ರಸಾದ್, ಉಪಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕಾರ್ಯಾಧ್ಯಕ್ಷ ಲೋಕನಾಥ್, ಉಪಾಧ್ಯಕ್ಷ ಜೆ.ಎನ್. ಲಕ್ಷ್ಮಣ್ ಹಾಗೂ ಸದಸ್ಯರು ಇದ್ದರು.