ಎನ್ಸಿಸಿ ವಾರ್ಷಿಕ ಶಿಬಿರ
ಕ.ಪ್ರ.ವಾರ್ತೆ ಮೈಸೂರು ಅ. 5
ಇಲವಾಲ ಸಮೀಪದ ಅಲೋಕ ವಿಹಾರ ಅರಮನೆ ಆವರಣದಲ್ಲಿ ಎನ್ಸಿಸಿಯು ಸಂಯೋಜಿತ ವಾರ್ಷಿಕ ಶಿಬಿರ ಆಯೋಜಿಸಿತ್ತು.ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಯ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಈ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು. ಶಿಬಿರದ ಕಮಾಂಡೆಂಟ್ ಕರ್ನಲ್ ಅಜಯ್ ಟೋಮರ್ ಮಾತನಾಡಿ, ಈ ಶಿಬಿರದ ಮೂಲಕ ಶಿಬಿರಾರ್ಥಿಗಳನ್ನು ವಿವಿಧ ಜಾಗೃತಿ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಿಗೆ ಆಯ್ಕೆ ಮಾಡಲಾಗುವುದು. ಗಣರಾಜ್ಯೋತ್ಸವ ಪೆರೇಡ್, ಪ್ರತಿಷ್ಠಿತ ಯುವ ವಿನಿಮಯ ಕಾರ್ಯಕ್ರಮಕ್ಕೂ ಆಯ್ಕೆ ಮಾಡಲಾಗುತ್ತದೆ ಎಂದರು.
ಅ.3 ರಂದು ಆರಂಭವಾದ ಶಿಬಿರ 12 ರಂದು ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ವ್ಯಾಯಾಮ, ಭೂಪಟ ಅಧ್ಯಯನ ಮತ್ತು ಶಸ್ತ್ರಾಸ್ತ್ರ ಬಳಕೆ ಕುರಿತು ಹೇಳಿಕೊಡಲಾಗುತ್ತದೆ. ಉಪನ್ಯಾಸ, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ, ಶ್ವಾನ ದಳದ ಕಾರ್ಯವೈಖರಿ, ಸಂಚಾರ ನಿಯಮಗಳನ್ನು ತಿಳಿಸಿಕೊಡುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.