'ಜಾತ್ಯತೀತ ಕಲ್ಪನೆಯ ಹೋರಾಟಗಾರ ಕಟ್ಟಿಮನಿ'
ಕ.ಪ್ರ.ವಾರ್ತೆ ಮೈಸೂರು ಅ. 5
ಸಾಹಿತಿ ಬಸರಾಜ ಕಟ್ಟಿಮನಿ ಅವರು ಜಾತ್ಯತೀತ ಕಲ್ಪನೆಯ ಹೋರಾಟಗಾರ ಎಂದು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸ್ನಾತಕ ಗ್ರಂಥಾಲಯ, ಮಹಾರಾಜ ಕಾಲೇಜು ಹಾಗೂ ಬಸವರಾಜ ಕಟ್ಟಿಮನಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶನಿವಾರ ಸ್ನಾತಕ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವರಾಜ ಕಟ್ಟಿಮನಿ ಬದುಕು- ಬರಹ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಕರ್ನಾಟಕದ ಹೋರಾಟಕ್ಕಾಗಿ ದುಡಿದ ಪ್ರಮುಖರಲ್ಲಿ ಕಟ್ಟಿಮನಿ ಸಹ ಒಬ್ಬರು. ಕುವೆಂಪು ನಂತರದ ತಲೆಮಾರಿನಲ್ಲಿ ಜಾತ್ಯತೀತ ಕಲ್ಪನೆ ಇಟ್ಚುಕೊಂಡು ಹೋರಾಟ ಮಾಡಿದರು. ಅನಕೃ, ಶ್ರೀರಂಗ ಮುಂತಾದ ಮಹನೀಯರ ಸಾಲಿಗೆ ಸೇರುತ್ತಾರೆ ಎಂದರು.
ಪತ್ರಕರ್ತರಾಗಿ, ಸಾಹಿತಿಯಾಗಿ ಹಾಗೂ ಹೋರಾಟಗಾರರಾಗಿ ಕಟ್ಟಿಯವರನ್ನು ಹತ್ತಿರದಿಂದ ಕಂಡಿದ್ದೇನೆ. ತುಂಬ ಪ್ರಾಮಾಣಿಕರಾಗಿದ್ದ ಅವರು, ದಲಿತರು ಮತ್ತು ಮಹಿಳೆಯರ ಬಗ್ಗೆ ಪ್ರೀತಿ ಹಾಗೂ ಗೌರವ ಇಟ್ಟುಕೊಂಡಿದ್ದರು. ಜನಪ್ರಿಯ ಕಾದಂಬರಿಗಳನ್ನು ಬರೆದವರು. ಜತೆಗೆ ಸಮಾಜಕ್ಕೆ ಕಾಣಿಕೆಯಾಗಬಹುದಾದ ಕಲಾಕೃತಿಗಳ ಸೃಷ್ಟಿಗೆ ಕಾರಣಕರ್ತರು ಎಂದು ಸ್ಮರಿಸಿದರು.
1970ರ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ದೇಶದ ವಿವಿಧ ಭಾಗದಲ್ಲಿ ತುರ್ತು ಪರಿಸ್ಥಿತಿ ಅಸಮಾಧಾನಕ್ಕೆ ಕಾರಣವಾಗಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಡಿ.ದೇವರಾಜ ಅರಸು ಅವರು ಜಾರಿಗೊಳಿಸಿದ ಜೀತಪದ್ಧತಿ ನಿರ್ಮೂಲನೆ, ಉಳುವವನಿಗೆ ಭೂಮಿ ಯೋಜನೆಗಳನ್ನು ಮೆಚ್ಚಿ ಕಾಂಗ್ರೆಸ್ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಹೊಸ ತಲಮಾರಿಗೆ ಕಟ್ಟಿಮನಿ ಪರಿಚಯ: ಹೊಸ ತಲೆಮಾರಿಗೆ ಕಟ್ಟಿಮನಿ ಅವರ ಕೃತಿಗಳನ್ನು ಪರಿಚಯಿಸುವ ಅಗತ್ಯವಿದೆ. ಅಲ್ಲದೆ ಅವರ ಬದುಕು ಬರಹ ಕುರಿತು ಹೆಚ್ಚು ಚರ್ಚೆಯಾಗಬೇಕು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಅಲೋಚನಾ ಶಕ್ತಿ ವೃದ್ಧಿಸಲಿದೆ ಎಂದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಡಿ. ಮಹಾದೇವಪ್ಪ ಉದ್ಘಾಟಿಸಿದರು. ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳಾಡಿದರು. ಕೋಶಾಧ್ಯಕ್ಷ ರಾಜಶೇಖರ ಕದಂಬ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಗೌರವ ಕಾರ್ಯದರ್ಶಿ ಡಾ.ವೈ.ಡಿ. ರಾಜಣ್ಣ ನಿರೂಪಿಸಿದರು. ವಿವಿ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ ಸ್ವಾಗತಿಸಿದರು. ಸ್ನಾತಕ ಗ್ರಂಥಾಲಯದ ಉಪಗ್ರಂಥಪಾಲಕ ಆರ್.ಕೆ. ಸೋಮಶೇಖರ್ ವಂದಿಸಿದರು.