ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಕ್ಕಳಿಗೆ ದೇವರೆ ಗತಿ!

Rashmi Kasaragodu
Updated On : 6 Oct 2013, 12:15 pm

 ಕೆ.ಟಿ. ಮೋಹನ್ಕುಮಾರ್
ಕ.ಪ್ರ.ವಾರ್ತೆ   ಸಾಲಿಗ್ರಾಮ್ಣ ಅ. 5
ಶಿಕ್ಷಣ ಕ್ಷೇತ್ರದ ತಳಪಾಯವೆಂದೆ ಕರೆಯಲ್ಪಡುವ ಕೇಂದ್ರಗಳೆ ಅಂಗನವಾಡಿ ಕೇಂದ್ರಗಳು. ಇಂತಹ ಕೇಂದ್ರಗಳನ್ನು ಎಲ್ಲೆಡೆ ತೆರೆದು ಅದರ ಮೇಲ್ವಿಚಾರಣೆಗಾಗಿ ಒಬ್ಬರು ಕಾರ್ಯಕರ್ತೆ ಹಾಗೂ ಒಬ್ಬರು ಸಹಾಯಕಿಯರನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಲಾಗಿದೆ.
ಇಂತಹ ಕೇಂದ್ರಗಳಿಗೆ ಮೂರು ವರ್ಷ ತುಂಬಿದ ಮಕ್ಕಳನ್ನು ಕರೆತಂದು ಅವರಿಗೆ ಆಟ, ಪಾಠ ಹೇಳಿಕೊಡುವುದರ ಜೊತೆಗೆ ಆ ಮುದ್ದು ಮಕ್ಕಳ ಆರೋಗ್ಯ ಸಂರಕ್ಷಿಸುವುದು ಹಾಗೂ ಅವುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಟ್ಟು ಕರ್ತವ್ಯ ನಿರ್ವಹಿಸಲಾಗುತ್ತಿದೆ. ಇಂತಹ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ಕಟ್ಟಿಕೊಡುವ ಕೆಲಸವು ಒಂದೆಡೆ ನಡೆಯುತ್ತಿದ್ದರೆ, ಕೆಲವು ಕಡೆಗಳಲ್ಲಿ ಖಾಸಗಿ ಕಟ್ಟಡಗಳಲ್ಲಿ ಕೇಂದ್ರಗಳು ನಡೆಯುತ್ತಿರುವುದು ಕಂಡು ಬರುತ್ತಿದೆ.
ಈ ಕೇಂದ್ರಗಳ ಆವರಣವನ್ನು ಶುಚಿಯಾಗಿ ಕಾಪಾಡುವುದರ ಮೂಲಕ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಆದರೆ ಕೆ.ಆರ್. ನಗರ ತಾಲೂಕಿನ ಕರ್ಪೂರವಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರವು ಅನೈರ್ಮಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕೇಂದ್ರದ ಮುಂಭಾಗದದಲ್ಲಿ ಗ್ರಾಮದ ಜನರು ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕುವ ರೀತಿಯಲ್ಲಿ ನಿತ್ಯ ಕಟ್ಟುತ್ತಾರೆ. ಜೊತೆಗೆ ಕೊಳಚೆ ನೀರಿನಿಂದ ಕೂಡಿದೆ.
ಕೇಂದ್ರದ ಪಕ್ಕದಲ್ಲೆ ತಿಪ್ಪೆಗುಂಡಿಗಳನ್ನು ಮಾಡಿಕೊಂಡು ನಿತ್ಯ ತ್ಯಾಜ್ಯ ವಸ್ತುಗಳನ್ನು ಅಲ್ಲಿಗೆ ತಂದು ಹಾಕುವುದು ಸಾಲದೆಂಬಂತೆ ಕೇಂದ್ರಕ್ಕೆ ಹೊಂದಿಕೊಂಡಂತೆ ಗಿಡಗಂಟೆಗಳು ಬೆಳೆದು ನಿಂತಿವೆ. ಇಷ್ಟು ಸಾಲದೆಂಬಂತೆ ಕೇಂದ್ರವಿರುವ ರಸ್ತೆಯು ಕಿರಿದಾಗಿದ್ದು ವಿದ್ಯುತ್ ಕಂಬ ಮತ್ತು ಅದರ ವೈರ್ ಅನ್ನು ಕೇಂದ್ರಕ್ಕೆ ಹೊಂದಿಕೊಂಡಂತೆ ಅಳವಡಿಸಲಾಗಿದೆ. ಏನಾದರು ವ್ಯತ್ಯಾಸವಾದರೆ ವಿದ್ಯುತ್ ಅವಘಡ ನಡೆದು ಅನಾಹುತ ಸಂಭವಿಸಬಹುದು.
ತಲೆಕೆಡಿಸಿಕೊಳ್ಳದ ಅಧಿಕಾರಿಗಳು: ಇಷ್ಟೆಲ್ಲ ಅವಾಂತರಗಳ ನಡುವೆ ಕೇಂದ್ರವು ತಲೆಯೆತ್ತಿ ನಿಂತಿದ್ದು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಪುಟ್ಟ ಮಕ್ಕಳೊಂದಿಗೆ ನಿತ್ಯ ತಮ್ಮ ಕಾಯಕವನ್ನು ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಚಿತ್ರವೆಂದರೆ ಈ ಗ್ರಾಮವು ಗ್ರಾಪಂ ಕೇಂದ್ರ ಸ್ಥಾನವಾಗಿದ್ದು, ಯಾರೂ ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವುದು ಕಂಡುಬರುತ್ತಿದೆ.
ಪ್ರಸ್ತುತ ದಿನಗಳಲ್ಲಿ ಎಲ್ಲೆಡೆ ಡೆಂಘೀ ಎಂಬ ಮಹಾಮಾರಿ ಹರಡುತ್ತಿದ್ದು, ಇದರಿಂದ ಎಲ್ಲರನ್ನು ರಕ್ಷಿಸಬೇಕಾದ ಜವಾಬ್ದಾರಿಯು ಸ್ಥಳೀಯ ಆಡಳಿತ ಹಾಗೂ ಆರೋಗ್ಯ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಹಲವು ಮಕ್ಕಳು ಮೃತಪಟ್ಟಿದ್ದು, ಕೆ.ಆರ್. ನಗರ ತಾಲೂಕಿನಲ್ಲಿ ಸುಮಾರು ಏಳು ಪ್ರಕರಣಗಳು ದಾಖಲಾಗಿವೆ. ಈ ರೋಗವು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿರುವ ಹಿನ್ನೆಲೆ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಕ್ಕಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ಅಂಗನವಾಡಿ ಕೇಂದ್ರಗಳಲ್ಲಿ ಉಳಿಸುವ ಮೂಲಕ ಅವರನ್ನು ಇಂತಹ ಸಾಂಕ್ರಾಮಿಕ ರೋಗಗಳಿಂದ ಕಾಪಾಡುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೂ ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಹಂತ ಹಂತವಾಗಿ ಸೊಳ್ಳೆ ಪರದೆಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ ಅಂತಹ ಕೇಂದ್ರಗಳ ನೈರ್ಮಲ್ಯತೆಯ ಬಗ್ಗೆ ಕ್ರಮ ವಹಿಸದೆ ಅಸಡ್ಡೆಯನ್ನು ತೋರಿರುವ ಜನರಿಗೆ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕೇಂದ್ರಕ್ಕೆ ಕಾಯಕಲ್ಪ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement