ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಯುವಶಕ್ತಿ ಅವಶ್ಯ

Rashmi Kasaragodu
Updated On : 6 Oct 2013, 12:15 pm

ಕ.ಪ್ರ.ವಾರ್ತೆ   ಮೈಸೂರು   ಅ. 5
ಯುವಶಕ್ತಿಯಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ವಹಣಾ ವಿಜ್ಞಾನ ವಿಭಾಗದ ನಿರ್ದೇಶಕ ಪ್ರೊ.ಸತ್ಯನಾರಾಯಣ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಅಧಿಕಾರಿಗಳ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮುಕ್ತ ಗಂಗೋತ್ರಿಯ ಎನ್ಎಸ್ಎಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ದಕ್ಷಿಣ ಕರ್ನಾಟಕ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಏಳು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಭಾರತವು ಇನ್ನೂ ಮುಂದುವರಿದ ದೇಶಗಳ ಸಾಲಿನಲ್ಲಿ ಇರುವುದು ಚಿಂತಿಸಬೇಕಾದ ಸಂಗತಿ. ಅಮೆರಿಕವನ್ನು ಅಣ್ಣ ಎಂದು ಸಂಭೋದಿಸುವ ನಾವು ಅಣ್ಣನ ಸಾಲಿನಲ್ಲಿ ನಿಲ್ಲುವುದು ಯಾವಾಗ ಹಾಗೂ ಡಾಲರ್ ನಿಯಂತ್ರಿಸುವುದು ಯಾವಾಗ ಎಂದು ಪ್ರಶ್ನಿಸಿದ ಅವರು, ಕೇವಲ ರಾಜಕೀಯವಾಗಿ ಬಲಿಷ್ಠವಾದರೆ ಸಾಲದು. ಆರ್ಥಿಕವಾಗಿಯೂ ಮುಂದುವರಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಇದಕ್ಕಾಗಿ ಯುವಶಕ್ತಿಯನ್ನು ರೂಪಿಸುವ ಕೆಲಸ ಮಾಡಬೇಕು ಎಂದರು.
ದೇಶಕ್ಕೆ ಬೇಕಾದ ಸಮಾಜವನ್ನು ಸೃಷ್ಟಿಸುವ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ತರಗತಿಯಲ್ಲಿನ ಬೋಧನೆ ಜತೆಗೆ ಸಾಮಾಜಿಕ ಜವಾಬ್ದಾರಿ ಹೊಂದುವುದು ಅವಶ್ಯಕ. ಕಲಿಕೆಗೆ ಹಾಗೂ ಕೌಶಲ ವೃದ್ಧಿಗೆ ಯಾವುದೇ ಕೊನೆಯಿಲ್ಲ. ಅಧ್ಯಾಪಕರು ಪುನರ್ಮನನ ಮಾಡಿಕೊಳ್ಳುವ ಮೂಲಕ ಜ್ಞಾನ ಸಂಪಾದಿಸಿ, ಭವಿಷ್ಯ ನಿರ್ಮಾಪಕರನ್ನು ತಯಾರಿಸುವಲ್ಲಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಗಿಡ ನೆಡಬೇಕು: ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಾದೇಶಿಕ ರಾಷ್ಟ್ರೀಯ ಸೇವಾ ಯೋಜನೆ ಉಪಸಲಹೆಗಾರ ಖಾದ್ರಿ ನರಸಿಂಹಯ್ಯ, ಗಾಂಧೀಜಿ ತತ್ವಗಳನ್ನು ಆಧರಿಸಿ ಎನ್ಎಸ್ಎಸ್ ಹಾಗೂ ಎನ್ವೈಕೆ ಯೋಜನೆ ಜಾರಿಗೊಳಿಸಿರುವುದರಿಂದ ಶ್ರಮದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು. ಪ್ರತಿ ಕಾಲೇಜು ಆವರಣದಲ್ಲಿ ವರ್ಷಕ್ಕೆ ಕನಿಷ್ಠ 5 ಗಿಡವನ್ನಾದರೂ ನೆಡಬೇಕು ಎಂದರು.
ಮುಕ್ತ ವಿವಿ ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ. ಸುರೇಶ್ ಮುಖ್ಯ ಅತಿಥಿಯಾಗಿದ್ದರು. ತರಬೇತಿ ಸಂಸ್ಥೆ ಸಂಯೋಜನಾಧಿಕಾರಿ ಡಾ.ಎನ್.ಆರ್. ಚಂದ್ರೇಗೌಡ ಸ್ವಾಗತಿಸಿದರು. ಎಸ್. ಪ್ರವೀಣ್ಕುಮಾರ್ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement