ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಿ'

Rashmi Kasaragodu
Updated On : 6 Oct 2013, 12:17 pm

ಕ.ಪ್ರ. ವಾರ್ತೆ, ಮೈಸೂರು, ಅ.5
ನವರಾತ್ರಿಗಳಲ್ಲಿ ಶಕ್ತಿ ದೇವತೆಗಳನ್ನು ಪೂಜಿಸುವ ನಾವು ಅದೇ ರೀತಿ ಸಮಾಜದಲ್ಲಿರುವ ನಮ್ಮ ಹೆಣ್ಣು ಮಕ್ಕಳನ್ನು ಗೌರವದಿಂದ ನೋಡುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲೆ ಪ್ರೊ.ಚ. ಸರ್ವಮಂಗಳ ಹೇಳಿದರು.
ದಸರಾ ಮಹೋತ್ಸವ ಅಂಗವಾಗಿ ರಂಗಾಯಣದಲ್ಲಿ ಹಮ್ಮಿಕೊಂಡಿರುವ ನವರಾತ್ರಿ ರಂಗೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ದಸರಾ ಮಹೋತ್ಸವದಲ್ಲಿ ಮೊದಲ ಮೂರು ದಿನ ಚಾಮುಂಡೇಶ್ವರಿ, ಇನ್ನು ಮೂರು ದಿನ ಲಕ್ಷ್ಮೀ, ಕೊನೆಯ ಮೂರು ಸರಸ್ವತಿ ಪೂಜಿಸುತ್ತೇವೆ. ಇಷ್ಟೆಲ್ಲಾ ಭಕ್ತಿ ಭಾವ ಬೆಳೆಸಿಕೊಂಡ ನಾವು ನಮ್ಮ ಅಕ್ಕಪಕ್ಕದ ಹೆಣ್ಣು ಮಕ್ಕಳನ್ನು ಒಳ್ಳೆಯ ರೀತಿಯಿಂದ ಕಾಣಬೇಕು ಎಂದರು.
ದಸರಾ ಮಹೋತ್ಸವವು ಒಳ್ಳೆಯ ರೂಪಕ. ಅಜ್ಞಾತ ವಾಸ ಮುಗಿಸಿ ಬಂದ ಪಾಂಡವರು ಬೆಳಕಿಗೆ ಬಂದ ಸಲುವಾಗಿ ದಸರಾ ಆಚರಿಸಲಾಗುತ್ತದೆ. ಅಂದರೆ ಅಜ್ಞಾತದಿಂದ ಜ್ಞಾತದೆಡೆಗೆ, ಕತ್ತಲೆಯಿಂದ ಬೆಳೆಕಿನೆಡೆಗೆ ಬರುವುದೇ ದಸರಾದ ಪ್ರತೀಕವಾದ. ನವರಾತ್ರಿ ರಂಗೋತ್ಸವವನ್ನು ಚಾಮುಂಡೇಶ್ವರಿ ಸ್ತುತಿಯೊಂದಿಗೆ ಆರಂಭಿಸಿದ್ದು ಶುಭ ಸಂಕೇತವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಮಕ ಕಲಾವಿದ ಮತ್ತು ಸಾಹಿತಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಅವರನ್ನು ಅಭಿನಂದಿಸಲಾಯಿತು. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಮೈಸೂರು ವೃತ್ತ ಕಚೇರಿಯ ಉಪಮಹಾಪ್ರಬಂಧಕ ಎಸ್.ಟಿ. ರಾಮಚಂದ್ರ, ನವರಾತ್ರಿ ರಂಗೋತ್ಸವ ಸಂಚಾಲಕ ಮೈಮ್ ರಮೇಶ್ ಇದ್ದರು. ರಂಗಾಯಣ ಉಪನಿರ್ದೇಶಕ ಎಸ್.ಐ. ಭಾವಿಕಟ್ಟೆ ಸ್ವಾಗತಿಸಿದರು.


ಇನ್ಸ್ಪೆಕ್ಟರ್ಗಳಿಗೆ ಬಡ್ತಿ
ಮೈಸೂರು: ರಾಜ್ಯದ 102 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಡಿವೈಎಸ್ಪಿಯಾಗಿ ಬಡ್ತಿಹೊಂದಿರುವ ಡಿ. ಧನಂಜಯ, ಎಂ.ಎಸ್. ಬುಳ್ಳಕ್ಕನವರ್ ಅವರನ್ನು ಕರ್ನಾಟಕ ಪೊಲೀಸ್ ಅಕಾಡೆಮಿ, ಬಿ.ಎಸ್. ರಾಜಶೇಖರ ಅವರನ್ನು ಸೆಸ್ಕ್, ಡಿ. ಜಯರಾಮು ಅವರನ್ನು ದಕ್ಷಿಣ ವಲಯ ಐಜಿಪಿ ಕಚೇರಿಗೆ ನಿಯೋಜಿಸಲಾಗಿದೆ.



ಇಬ್ಬರಿಗೆ ಮೈಸೂರು ವಿವಿ ಡಾಕ್ಟರೇಟ್
ಮೈಸೂರು: ಡಾ.ಎಸ್. ಲತಾ ಅವರ ಮಾರ್ಗದರ್ಶನದಲ್ಲಿ ಗಣಿತ ವಿಷಯದಲ್ಲಿ ಸಂಶೋಧನೆ ನಡೆಸಿ ಎನ್. ರವಿಕುಮಾರ್ ಅವರು ಸಾದರಪಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್ಡಿ ಪದವಿ ನೀಡಿದೆ. ಜೀವವಿಜ್ಞಾನ ವಿಷಯದಲ್ಲಿ ಡಾ.ಎಸ್.ಎನ್. ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿ. ಗುಣ ಅವರು ಮಂಡಿಸಿದ ಮಹಾ ಪ್ರಬಂಧಕ್ಕೂ ಪಿಎಚ್ಡಿ ಪದವಿ ನೀಡಿದೆ.


ಅತ್ಯಾಚಾರ ಎಸಗಿ ಆರೋಪಿ ಪರಾರಿ
ಎಚ್.ಡಿ. ಕೋಟೆ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆರೋಪಿ ಪರಾರಿಯಾಗಿರುವ ಘಟನೆ ತಾಲೂಕಿನ ಕಾರಪುರದಲ್ಲಿ ಜರುಗಿದೆ. ಗ್ರಾಮದ ಕುಮಾರ (18) ಎಂಬಾತ ಅತ್ಯಾಚಾರ ಎಸಗಿ ಪರಾರಿಯಾದವನು. ಈತ ಅ.2 ರಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಅ.4ರಂದು ಈ ವಿಷಯ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಬೀಚನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆ ದಾಖಲಿಸಲಾಗಿದೆ.
ಇಂದು ಸಿಎಂ ಜನತಾದರ್ಶನ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.6 ರಂದು ಬೆಳಗ್ಗೆ 10 ರಿಂದ ನಜರಬಾದಿನ ಸರ್ಕಾರಿ ಅತಿಥಿಗೃಹದಲ್ಲಿ ಜನತಾ ದರ್ಶನ ನಡೆಸುವರು. ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದು.
ಇಂದಿನಿಂದಲೇ ಮಧ್ಯಂತರ ರಜೆ
ಮೈಸೂರು: ಜಿಲ್ಲೆಯ ಶಾಲೆಗಳಿಗೆ ಅ.10 ರಿಂದ 29 ರವರೆಗೆ ಬದಲು ಅ.7 ರಿಂದ 29 ರವರೆಗೆ ಮಧ್ಯಂತರ ರಜೆ ಘೋಷಿಸಲಾಗಿದೆ ಎಂದು ಡಿಡಿಪಿಐ ಬಿ.ಕೆ. ಬಸವರಾಜು ತಿಳಿಸಿದ್ದಾರೆ. ಮಕ್ಕಳು ದಸರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅ.10 ರಿಂದ ಮಧ್ಯಂತರ ರಜೆ ನೀಡಿ, ಈ ಮೂರು ದಿನಗಳನ್ನು ನಂತರ ಸರಿದೂಗಿಸಲು ನಿರ್ಧರಿಸಲಾಗಿತ್ತು. ಆದರೆ ಜಿಪಂ ಸಿಇಒ ಆದೇಶದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಒಳಾಂಗಣ ವಿನ್ಯಾಸ ಶಿಬಿರ
ಮೈಸೂರು: ಮೈಸೂರು ಇಂಟೀರಿಯರ್ಸ್ ಮತ್ತು ಡಿಸೈನ್ ಅಕಾಡೆಮಿಯು ಒಳಾಂಗಣ ವಿನ್ಯಾಸದ ಒಂದು ವರ್ಷದ ಡಿಪ್ಲೊಮಾ ತರಗತಿಯನ್ನು ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಅ.9 ರಿಂದ ಆರಂಭಿಸಿದೆ. ತರಗತಿಯು ಮಧ್ಯಾಹ್ನ 2 ರಿಂದ ಸಂಜೆ 4 ಹಾಗೂ ಸಂಜೆ 6 ರಿಂದ ರಾತ್ರಿ 8 ರವರೆಗೆ ನಡೆಯಲಿದೆ. ಭರ್ತಿ ಮಾಡಿದ ಅರ್ಜಿಯನ್ನು ಅ.7 ರೊಳಗೆ ಹಿಂದಿರುಗಿಸಬೇಕು. ಹೆಚ್ಚಿನ ಮಾಹಿತಿಗೆ ದೂ.0821- 4256549 ಅಥವಾ ಮೊ. 9448850502 ಸಂಪರ್ಕಿಸಬಹುದು.



ಶೈಕ್ಷಣಿಕ ಅಭಿವೃದ್ಧಿ
ಮೈಸೂರು: ಶ್ರೀರಾಂಪುರ ಕ್ಲಸ್ಟರ್ ಗುರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವತೋಮುಖ ಅಭಿವೃದ್ಧಿಗಾಗಿ ನಡೆದ ಶಾಲಾ ಶೈಕ್ಷಣಿಕ ಅಭಿವೃದ್ಧಿ ಹಾಗೂ ಶಾಲಾ ನಕ್ಷೆ ತಯಾರಿಕೆ ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ದೇವಮ್ಮ, ಸದಸ್ಯ ಶಿವಕುಮಾರ್ ಮಾತನಾಡಿದರು. ಸಿಆರ್ಪಿ ಅಶೋಕ್ ಮಾತನಾಡಿ, ಶಾಲೆಗೆ ಎಲ್ಲ ಭಾಗೀದಾರರ ಸಹಕಾರ ಪಡೆದುಕೊಂಡು ಶಾಲೆಯನ್ನು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಹೇಗೆ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು. ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement