ಇಬ್ಬರು ಅಂತರಾಜ್ಯ ಆರೋಪಿಗಳ ಸೆರೆ
ಮೈಸೂರು: ನಗರದ ನರಸಿಂಹರಾಜ ಠಾಣೆ ಪೊಲೀಸರು ಇಬ್ಬರು ಅಂತರಾಜ್ಯ ಆರೋಪಿಗಳನ್ನು ಬಂಧಿಸಿ 2 ನಾಡ ಪಿಸ್ತೂಲು ಮತ್ತು 12 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರಪ್ರದೇಶದ ಬದಾಯಿ ಜಿಲ್ಲೆ ನಿವಾಸಿಗಳಾದ ಇರ್ಫಾನ್ ಪಾಷ ಅ. ಅಪ್ಸರ್ ಪಾಷ (35) ಮತ್ತು ರಾಮ್ ಬಜನ್ ಅ. ಸುರೇಶ (41) ಬಂಧಿತರು. ಮೂಲತಃ ಉತ್ತರಪ್ರದೇಶದವರಾದ ಇಬ್ಬರು ಕಳೆದ 8 ವರ್ಷಗಳಿಂದ ಗೌಸಿಯಾನಗರ ಮತ್ತು ಶಾಂತಿನಗರಗಳಲ್ಲಿ ವಾಸವಾಗಿ, ಗಾರೆಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬನ್ನಿಮಂಟಪ ಎ ಬಡಾವಣೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಶುಕ್ರವಾರ ಹಿಡಿದು ಪರಿಶೀಲಿಸಿದಾಗ ಪಿಸ್ತೂಲು ಮತ್ತು ಜೀವಂತ ಗುಂಡುಗಳು ಪತ್ತೆಯಾಗಿವೆ. ಇವುಗಳನ್ನು ಉತ್ತರಪ್ರದೇಶದಿಂದ ತಂದಿರುವುದಾಗಿ ಆರೋಪಿಗಳನ್ನು ತಿಳಿಸಿದ್ದಾರೆ. ಇದರಿಂದ ಪೊಲೀಸರಲ್ಲಿ ಶಂಕೆ ಹೆಚ್ಚಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.