ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಣ್ಣ ಬಣ್ಣದ ದೀಪ...

Mainashree
Updated On : 6 Oct 2013, 10:40 am

ಕ.ಪ್ರ.ವಾರ್ತೆ  ಮೈಸೂರು  ಅ.6
ಮೈಸೂರು ದಸರೆ ಎಂದರೆ ಜಂಬೂ ಸವಾರಿ ಅರ್ಥಾತ್ ಆನೆಗಳ ದರ್ಬಾರ್. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುವ ದೀಪಾಲಂಕಾರ- ಬೆಳಕಿನ ಚಿತ್ತಾರ ಮಾತ್ರವಲ್ಲ. ಬಣ್ಣ, ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಯೂ ಸೇರಿಕೊಂಡಿದೆ.
ಅರಮನೆಗಳ ನಗರಿ, ಸಾಂಸ್ಕೃತಿಕ ನಗರಿ ಎನಿಸಿಕೊಂಡಿರುವ ಮೈಸೂರು ಪಾರಂಪರಿಕ ನಗರಿಯೂ ಹೌದು. ನಗರ ಹಲವಾರು ಮೂರ್ತ ಹಾಗೂ ಅಮೂರ್ತ ಪರಂಪರೆಗಳ ಆಗರವಾಗಿದೆ. ಮೈಸೂರಿನಲ್ಲಿ ಸುಮಾರು 240 ಪಾರಂಪರಿಕ ಕಟ್ಟಡಗಳಿವೆ. ಇವುಗಳು ಇಂಡೋ ಸಾರ್ಸನಿಕ್, ಗೋಥಿಕ್, ರೋಮನ್, ಯುರೋಪಿಯನ್ ಶೈಲಿಯಲ್ಲಿ ನಿರ್ಮಾಣವಾಗಿವೆ.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪಾರಂಪರಿಕ ಕಟ್ಟಡಗಳು ದಸರೆಯ ಸಂದರ್ಭದಲ್ಲಿ ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿವೆ.
ಮೈಸೂರಿನಲ್ಲಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯಲ್ಲದೇ ಹತ್ತಾರು ಅರಮನೆಗಳಿವೆ. ರಾಜಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಈ ಕಟ್ಟಡಗಳೆಲ್ಲ ಈಗ ಸಾರ್ವಜನಿಕ ಕಚೇರಿಗಳಾಗಿವೆ. ಲಲಿತಮಹಲ್ ಅರಮನೆ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಹೊಟೇಲ್. ಅರಮನೆ, ಶ್ರೀ ಕೃಷ್ಣರಾಜೇಂದ್ರ ವೃತ್ತ,. ಶ್ರೀ ಚಾಮರಾಜೇಂದ್ರ ವೃತ್ತ, ವಸ್ತು ಪ್ರದರ್ಶನ ಪ್ರವೇಶ ದ್ವಾರ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಪಾರಂಪರಿಕ ಕಟ್ಟಡಗಳು ಹಸಿರು, ನೀಲಿ, ಬಿಳಿ, ಕೆಂಪು, ಹಳದಿ- ಹೀಗೆ ಒಂದೊಂದು ಬಣ್ಣದಿಂದ ಕಂಗೊಳಿಸುತ್ತಿವೆ.
ದೀಪಗಳಿಂದ ಮಿನುಗುತ್ತಿವೆ: ಪುರಭವನ, ನಗರಪಾಲಿಕೆ ಕಟ್ಟಡ, ಸಾರ್ವಜನಿಕ ಕಚೇರಿ ಕಟ್ಟಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡ, ನ್ಯಾಯಾಲಯ, ಕೆ.ಆರ್. ಆಸ್ಪತ್ರೆ, ರೇಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿ, ಜಿಪಂ ಕಟ್ಟಡ, ಮೈಸೂರು ವಿವಿ ಕಾರ್ಯಸೌಧ, ಶ್ರೀ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಕಟ್ಟಡ, ಮೈಸೂರು ವೈದ್ಯಕೀಯ ಕಾಲೇಜು ಕಟ್ಟಡ, ಪ್ರಾಚ್ಯ ವಿದ್ಯಾ ಸಂಶೋಧನಾಲಯ, ಸಿಎಫ್‌ಟಿಆರ್‌ಐ, ವೆಲ್ಲಿಂಗ್‌ಟನ್ ಕಟ್ಟಡ, ಪ್ರಧಾನ ಅಂಚೆ ಕಚೇರಿ, ನಗರ ಬಸ್ ನಿಲ್ದಾಣ, ಸರ್ಕಾರಿ ಆಯುರ್ವೇದ ಕಾಲೇಜು ಕಟ್ಟಡ ದೀಪಾಲಂಕಾರದಿಂದ ಮಿನುಗುತ್ತಿವೆ.
'ಹಾಡು ಹಳೆಯದಾದರೇನು, ಭಾವ ನವನವೀನ' ಎಂಬಂತೆ ಕಟ್ಟಡಗಳು ಹಳೆಯವಾದರೂ ಸೌಂದರ್ಯಕ್ಕೆ ಯಾವುದೇ ಚ್ಯುತಿ ಬಂದಿಲ್ಲ. ಹಿಂದಿನ ಶಿಲ್ಪಿಗಳ ಕೈಚಳಕವೇ ಅಂತದ್ದು. ಮೈಸೂರನ್ನು ಆಳಿದ ಯದುವಂಶದ ರಾಜರು ಅಮೆರಿಕ, ಬ್ರಿಟನ್ ಮೊದಲಾದ ಕಡೆ ಪ್ರವಾಸಕ್ಕೆ ಹೋದಾಗ ಅಲ್ಲಿನ ವಾಸ್ತುಶಿಲ್ಪಕ್ಕೆ ಮನಸೋತು ಅದೇ ಮಾದರಿಯ ಕಟ್ಟಡಗಳನ್ನು ನಿರ್ಮಿಸಿ, ಮೈಸೂರಿನ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ.
ಟಾಂಗಾದಲ್ಲಿ ಸುತ್ತು: ಷಾ ಪಸಂದ್- ಟಾಂಗಾ ಗಾಡಿಗಳಲ್ಲಿ ಕುಳಿತು, ಒಂದು ಸುತ್ತು ಹಾಕಬಹುದು. ಪಾರಂಪರಿಕ ಕಟ್ಟಡಗಳ ಚೆಲುವನ್ನು ಸವಿಯಬಹುದು. ಫೋಟೋ ಕ್ಲಿಕ್ಕಿಸಬಹುದು. ಇದಕ್ಕಾಗಿ ದಸರಾ ಮಹೋತ್ಸವ ಪ್ರವಾಸೋದ್ಯಮ ಉಪ ಸಮಿತಿಯು 8 ಸಾರೋಟುಗಳು ಹಾಗೂ 9 ಟಾಂಗಾಗಳ ವ್ಯವಸ್ಥೆ ಮಾಡಿದೆ. ಟಾಂಗಾವಾಲರಿಗೆ ಸಮವಸ್ತ್ರ, ಮೈಸೂರು ಪೇಟಾ, ಗೌರವಧನ ನೀಡಿದೆ. ಪ್ರವಾಸಿಗರು ಅರಮನೆ ಉತ್ತರ ದ್ವಾರದ ಬಳಿಯಿಂದ ಟಾಂಗಾ ಸವಾರಿಗೆ ತೆರಳಬಹುದು.
ಈ ಮೂರ್ತ ಪಾರಂಪರಿಕ ಮೌಲ್ಯವನ್ನು ಸಾರ್ವಜನಿಕರ ಅರಿವಿಗೆ ತರಲು ದಸರಾ ಮಹೋತ್ಸವ ಸಮಿತಿಯು ಅ.7 ರಿಂದ 9ರವರೆಗೆ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿದೆ. ಪುರಭವನ ಬಳಿಯಿಂದ ಆರಂಭವಾಗುವ ಈ ನಡಿಗೆ ದೊಡ್ಡ ಗಡಿಯಾರ, ಚಾಮರಾಜ ವೃತ್ತ, ಅಂಬಾವಿಲಾಸ ಅರಮನೆ, ಕೃಷ್ಣರಾಜ ವೃತ್ತ, ದೇವರಾಜ ಮಾರುಕಟ್ಟೆ, ಕೆ.ಆರ್. ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು, ಆಯುರ್ವೇದ ಆಸ್ಪತ್ರೆಯವರೆಗೂ ನಡೆಯಲಿದೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments