ಮೈಸೂರು ನೋಡಲು ಚೆಂದ ಆದರೆ, ಕಾಡು ಇರಲು ಅಂದ
ಕ.ಪ್ರ.ವಾರ್ತೆ ಮೈಸೂರು ಅ.6
ಇದೇ ಮೊದಲ ಬಾರಿಗೆ ಮೈಸೂರು ಹಾಗೂ ದಸರಾ ಮಹೋತ್ಸವ ನೋಡಲು ನಾವು ಇಲ್ಲಿಗೆ ಬಂದಿದ್ದೇವೆ. ನಮಗೆ ಮೈಸೂರು ನೋಡಲು ಚೆಂದವಾಗಿ ಕಾಣುತ್ತಿದೆ. ಆದರೆ, ನಮಗೆ ಇರಲು ಕಾಡೇ ಅಂದ....
- ಹೀಗೆ ಹೇಳಿದವರು ದಸರಾ ದರ್ಶನಕ್ಕೆ ಆಗಮಿಸಿದ ಕಾಡು ಜನರು. ಹೌದು, ದಸರಾ ದರ್ಶನ ಉಪಸಮಿತಿಯು ಗಿರಿಜನರಿಗಾಗಿ ವಿಶೇಷವಾಗಿ ಎರಡು ಬಸ್ ವ್ಯವಸ್ಥೆ ಮಾಡಿತ್ತು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಗಿರಿಜನ ಕಾಲೋನಿ ಮತ್ತು ಇತರೆ ಕಾಲೋನಿಗಳಿಂದ ಬುಡಕಟ್ಟು ಜನರನ್ನು ದಸರಾ ವೀಕ್ಷಣೆಗಾಗಿ ಕರೆ ತರಲಾಗಿತ್ತು.
ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಈ ಗಿರಿಜನರಿಗೆ ದಸರಾ ದರ್ಶನಕ್ಕೆ ಭಾನುವಾರ ಬೆಳಗ್ಗೆ ಸ್ವಾಗತ ಕೋರಲಾಯಿತು. ಎರಡು ಬಸ್ಸಿನಲ್ಲಿ ತಲಾ 54 ಮಂದಿಯಂತೆ 108 ಗಿರಿಜನರಿಗೆ ದಸರಾ ದರ್ಶನಕ್ಕೆ ಕರೆತರಲಾಗಿತ್ತು. ಮೊದಲ ದಿನವಾದ್ದರಿಂದ ಈ ಎರಡು ಬಸ್ಸಿನಲ್ಲಿ ಆಗಮಿಸಿದ್ದವರಿಗೆ 50 ರಿಯಾಯಿತಿ ಪ್ರವಾಸದ ಪಾಸ್ಗಳನ್ನು ಉಚಿತವಾಗಿ ನೀಡಲಾಗಿತ್ತು.
ಮೈಸೂರು ನೋಡಲು ಚೆನ್ನಾಗಿದೆ. ಆದರೆ, ನಾವು ಇರೋದಕ್ಕೆ ಕಾಡು ಬೇಕೇಬೇಕು. ಇದೇ ಮೊದಲ ಬಾರಿಗೆ ಮೈಸೂರನ್ನು ನೋಡುತ್ತಿದ್ದೇವೆ. ತುಂಬಾ ಖುಷಿ ಆಗುತ್ತಿದೆ ಎಂದು ಮದ್ದೂರು ಕಾಲೋನಿ ಹಾಡಿಯ ಮಾದಮ್ಮ ಹೇಳಿದರು. ನಂತರ ತಮ್ಮ ಹಾಡಿಯ ಇತರೆ ಮಹಿಳೆಯರೊಂದಿಗೆ ಸೇರಿಕೊಂಡು ಪಿನಾಸಿ ಎಂಬ ಹಾಡಿನೊಂದಿಗೆ ನೃತ್ಯ ಪ್ರದರ್ಶಿಸಿದರು.
ಕಲಿಯಬೇಕೆಂಬ ಆಸೆ: ನಮ್ಮಪ್ಪ ಮಹದೇವ, ಅಮ್ಮ ಶಾರದ ಜೊತೆಗೆ ಮೈಸೂರಿಗೆ ಬಂದಿದ್ದೇನೆ. ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸುತ್ತಾಡಿಕೊಂಡು ಹೋಗುತ್ತೇವೆ. ಅಪ್ಪ ಅಮ್ಮ ಓದಿಲ್ಲ. ನಾನು ಶಾಲೆಗೆ ಹೋಗುತ್ತಿದ್ದೇನೆ. ವಿದ್ಯಾವಂತನಾಗಬೇಕೆಂಬುದು ನಮ್ಮೆಲ್ಲರ ಆಸೆ ಎಂದವರು 4ನೇ ತರಗತಿ ವಿದ್ಯಾರ್ಥಿ ನಿತಿನ್.
ಮೈಸೂರು ನೋಡಬೇಕೆಂಬುದು ನಮ್ಮ ಆಸೆ. ಈಗ ಈಡೇರಿದೆ. ಶಾಲೆ ಮತ್ತು ಹಾಡಿಯಲ್ಲಿ ನಾನು ಮೈಸೂರು, ದಸರಾ ನೋಡಿರುವುದಾಗಿ ಹೇಳಿಕೊಳ್ಳುತ್ತೇನೆ ಎಂದು ಸಂಭ್ರಮಿಸಿದರು ಅವಿನಾಶ್.
ಕಾಡಿನಿಂದ ನಾಡಿಗೆ ಬಂದಿದ್ದ ಈ ಗಿರಿಜನರಿಗೆ ಮೈಸೂರು ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ ಜೊತೆಗೆ ದಸರಾ ವಸ್ತುಪ್ರದರ್ಶನ ಹಾಗೂ ದಸರಾ ಕಾರ್ಯಕ್ರಮಗಳನ್ನು ತೋರಿಸಲು ಬಸ್ ಹೊರಟಿತು.
ದಸರಾ ದರ್ಶನಕ್ಕಾಗಿ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ, ಮಗುವಿನಹಳ್ಳಿ ಸೇರಿದಂತೆ 7-8 ಹಾಡಿ ಜನರನ್ನು ಇದೇ ಮೊದಲ ಬಾರಿಗೆ ಮೈಸೂರಿಗೆ ಕರೆತರಲಾಗಿದೆ. ಈ ಹಾಡಿ ಜನರು ಎಂದೂ ಸಹ ಮೈಸೂರನ್ನು, ದಸರಾ ನೋಡಿರಲಿಲ್ಲ. ಈಗ ಈ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ.
ರತ್ನಮ್ಮ, ದಸರಾ ದರ್ಶನ ಉಪಸಮಿತಿ ಸದಸ್ಯೆ ಹಾಗೂ ಗಿರಿಜನರ ಮುಖಂಡರು.
ಬಿ. ಶೇಖರ್ ಗೋಪಿನಾಥಂ