ಸುದ್ದಿ ಸಂಕ್ಷೇಪ
ಚಾ.ನಗರದಲ್ಲಿ ಉರುಳು ಸೇವೆ
ಮೈಸೂರು: ಮುಖ್ಯಮಂತ್ರಿಯಾದ ಬಳಿಕ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿ ರಾಜ್ಯ ಹಿಂದುಳಿದ ಅಲ್ಪಸಂಖ್ಯಾತ ದಲಿತ ವೇದಿಕೆಯಿಂದ ಅ.7 ರಂದು ಅಲ್ಲಿ ಉರುಳು ಸೇವೆ ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರಕ್ಕೆ ತಗುಲಿರುವ ಶಾಪ ತೊಡೆದು ಹಾಕಲು ಹಾಗೂ ತಾವು ಮೂಢ ನಂಬಿಕೆ ನಂಬುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಐದು ತಿಂಗಳೊಳಗೆ ಚಾಮರಾಜನಗರಕ್ಕೆ ಹೋಗುತ್ತಿದ್ದು, ಬೆಳಗ್ಗೆ 9ಕ್ಕೆ ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗ ಉರುಳು ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಕಂಸಾಳೆ ರವಿ ತಿಳಿಸಿದ್ದಾರೆ.
ಬಗರ್ಹುಕುಂ ಹಕ್ಕುಪತ್ರಕ್ಕಾಗಿ ಸಮಾವೇಶ
ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿ ರಚಿಸಲು ಹಾಗೂ ಬಗರ್ ಹುಕುಂ ಸಾಗುವಳಿದಾರ ರೈತರ ಜಮೀನುಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಅ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಮಟ್ಟದ ರ್ಯಾಲಿ ಹಾಗೂ ಸಮಾವೇಶ ಆಯೋಜಿಸಲಾಗಿದೆ. ಸುಮಾರು ವರ್ಷಗಳಿಂದ ಸಾಗುವಳಿದಾರರಾಗಿ ಬೇಸಾಯ ಮಾಡಿಕೊಂಡು ಬಂದಿರುವ ರೈತರಿಗೆ ಬಗರ್ ಹುಕುಂ ಹಕ್ಕು ನೀಡದೆ ಸರ್ಕಾರ ವಿನಾಕಾರಣ ಸತಾಯಿಸುತ್ತಿದೆ. ರಾಜ್ಯದ ಕಂದಾಯ ಭೂಮಿ ಮತ್ತು ಅರಣ್ಯ ಇಲಾಖೆಯ ಸಿ ಮತ್ತು ಡಿ ದರ್ಜೆಯ ಜಮೀನಿನಲ್ಲಿ ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರ ಭೂಮಿ ಮಂಜೂರಾತಿ ಮಾಡಿ ಹಕ್ಕು ಪತ್ರ ವಿತರಿಸುವಂತೆ ರೈತ ಕೃಷಿ ಕಾರ್ಮಿಕ ಸಂಘದ ಅಧ್ಯಕ್ಷ ಟಿ.ಎಸ್. ಸುನೀಲ್ ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ನಮ್ಮೆಲ್ಲಾ ಬೇಡಿಕೆಗಳನ್ನು ಮುಂದಿಟ್ಟು ನಡೆಸುತ್ತಿರುವ ಸಮಾವೇಶವು ಅಂದು ಬೆಳಗ್ಗೆ 10ಕ್ಕೆ ಆರಂಭವಾಗಲಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬೆಂಬಲ ನೀಡಿ ಭಾಗವಹಿಸುವರು. ಬಡ ಮತ್ತು ಭೂಹೀನ ರೈತರ ಅನುಕೂಲಕ್ಕಾಗಿ ಹಾಗೂ ಅವರ ಜೀವನಾಧಾರಕ್ಕಾಗಿ ಸರ್ಕಾರ ಕ್ರಮವಹಿಸಬೇಕಿದೆ. ಬ್ಯಾಂಕ್ ಸಾಲ ಸೌಲಭ್ಯ, ಆರೋಗ್ಯ, ಕೃಷಿ ಅಭಿವೃದ್ಧಿ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಪರಿಹಾರವಾಗಿ ಅವರಿಗೆ ಹಕ್ಕು ಪತ್ರ ನೀಡಿ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಪದಾಧಿಕಾರಿಗಳಾದ ಎಚ್.ವಿ. ದಿವಾಕರ್, ಎಂ. ಶಶೀಧರ್, ಎಚ್.ಪಿ. ಶಿವಪ್ರಕಾಶ್ ಇದ್ದರು.
ಭಾರ ಎತ್ತುವ ಸ್ಪರ್ಧೆ: ವಿನೂತ್ ಪ್ರಥಮ
ಮೈಸೂರು: ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯ 56 ಕೆ.ಜಿ ವಿಭಾಗದಲ್ಲಿ ಮೈಸೂರಿನ ಎಸ್. ವಿನೂತ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಮೂಡಬಿದ್ರೆಯ ಎಂ.ಎಸ್. ಹರೀಶ್ ದ್ವಿತೀಯ ಸ್ಥಾನಗಳಿಸಿದ್ದರೆ, 62 ಕೆ.ಜಿ. ವಿಭಾಗದಲ್ಲಿ ಮೈಸೂರಿನ ಎನ್.ಪ್ರವೀಣ್ ಪ್ರಥಮ, ಮೂಡಬಿದ್ರೆಯ ಸ್ವಸ್ಥಿಕ್ ಕೆ. ಶೆಟ್ಟಿ ದ್ವಿತೀಯ, 69 ಕೆ.ಜಿ. ವಿಭಾಗದಲ್ಲಿ ಮೈಸೂರಿನ ಎ.ಬಾಬು ಪ್ರಥಮ, ಮೂಡಬಿದ್ರೆಯ ಮೋಹನ್ ದ್ವಿತೀಯ, 77 ಕೆ.ಜಿ. ವಿಭಾಗದಲ್ಲಿ ಉಜಿರೆಯ ಡಿ.ಆರ್. ಹರ್ಷ ಪ್ರಥಮ, ಮೂಡಬಿದ್ರೆಯ ನವೀದ್ ದ್ವಿತೀಯ ಸ್ಥಾನಗಳಿಸಿದ್ದಾರೆ. 85 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಸಿ. ಇಬ್ರಾಹಿಂ ಪ್ರಥಮ, ಜಯಕುಮಾರ್ ದ್ವಿತೀಯ ಸ್ಥಾನಗಳಿಸಿದ್ದಾರೆ.