ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

28 ರಂದು ರೈತರ ಬೃಹತ್ ಸಮಾವೇಶ

Rashmi Kasaragodu
Updated On : 8 Oct 2013, 12:51 pm

ಕ.ಪ್ರ.ವಾರ್ತೆ    ಮೈಸೂರು    ಅ. 7
ಹೊರ ದೇಶದ ಕೃಷಿ ಉತ್ಪನ್ನಗಳ ಆಮದು ನಿಲ್ಲಿಸುವುದೂ ಸೇರಿದಂತೆ ರೈತರ 24 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲು ಅ.28 ರಂದು ಬೆಂಗಳೂರಿನ ಫ್ರೀಡಂ ಉದ್ಯಾನದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.
ಅಂದು ಮಧ್ಯಾಹ್ನ 12ಕ್ಕೆ ನಡೆಯುವ ಸಮಾವೇಶ ನರ್ಮದಾ ನದಿ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಾಹಿತಿ ದೇವನೂರ ಮಹಾದೇವ ಉದ್ಘಾಟಿಸುವರು. ಭಾರತ ಕಿಸಾನ್ ಸಂಘದ ರಾಷ್ಟ್ರಾಧ್ಯಕ್ಷ ವಿದ್ವರ್ಸಿಂಗ್, ರೈತ ಮುಖಂಡ ರಾಕೇಶ್ ಟಿಕಾಯತ್, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಸರ್ಕಾರವು ವಿಶ್ವ ವಾಣಿಜ್ಯ ಒಪ್ಪಂದದ ಪ್ರಕಾರ ಕೃಷಿ ಉತ್ಪನ್ನಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಕೃಷಿಯನ್ನೇ ನಂಬಿದ್ದ ರೈತರಲ್ಲಿ ಶೇ.40 ರಷ್ಟು ಮಂದಿ ಹಳ್ಳಿಗಳಿಂದ ಗುಳೆ ಹೋಗುತ್ತಿದ್ದಾರೆ. ಉತ್ಪನ್ನಗಳ ಆಮದಿನಿಂದ ಇಲ್ಲಿನ ರೈತರು ಬೆಳೆದ ಬೆಳೆಗೆ ಬೆಲೆ ಕುಸಿತ ಕಂಡಿದೆ. ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ಕೃಷಿಯನ್ನು ಈ ಒಪ್ಪಂದದಿಂದ ಹೊರಗಿಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ವರ್ಷಗಳಿಂದ ಬರದಿಂದ ತತ್ತರಿಸಿದ್ದ ರಾಜ್ಯದಲ್ಲಿ ಮಳೆ ಬಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೆಚ್ಚು ಮಳೆಯಾದ ಕಡೆ ಅತಿವೃಷ್ಟಿ ಹಾಗೂ ಕಡಿಮೆ ಮಳೆಯಾದ ಕಡೆ ಅನಾವೃಷ್ಟಿ ತಲೆದೋರಿದೆ. ಕೃಷಿ ಚಟುವಟಿಕೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಬಜೆಟ್ ಮಂಡಿಸುವ ಮುನ್ನ ನಮ್ಮನ್ನೆಲ್ಲ ಕರೆದು ಅಭಿಪ್ರಾಯ ಪಡೆದಿದ್ದ ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ ಎಂದು ವಿಷಾದಿಸಿದರು.
ಕೆರೆಗಳನ್ನು ಅಭಿವೃದ್ಧಿಪಡಿಸಿ: ರಾಜ್ಯದಲ್ಲಿರುವ ಸುಮಾರು 3 ಸಾವಿರಕ್ಕೂ ಅಧಿಕ ಕೆರೆಗಳನ್ನು ಸಂರಕ್ಷಿಸಲು ಕೆರೆ ಪ್ರಾಧಿಕಾರ ರಚಿಸಲಾಗಿದೆ. ಇದರ ನಿರ್ವಹಣೆಗೆ ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗಿದೆ. ಕೆರೆಗಳ ಪುನಶ್ಚೇತನಕ್ಕೆ ಪೂರ್ವ ಯೋಜನೆ ತಯಾರಿಸಿಕೊಂಡಿಲ್ಲ. ಎಷ್ಟೋ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದರೆ, ಮತ್ತಷ್ಟು ಕೆರೆಗಳಲ್ಲಿ ಹೂಳು, ಕಸ ಕಡ್ಡಿಯೇ ತುಂಬಿಕೊಂಡಿದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಇನ್ನು ರೈತರ ಬೆಳೆಗೆ ನೀರು ಒದಗಿಸಲು ದಿನದ 12 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ವಿದ್ಯುತ್ತನ್ನು ಆದ್ಯತಾ ವಲಯ ಎಂದು ಪರಿಗಣಿಸಿ ವಿದ್ಯುತ್ ಉತ್ಪಾದನೆಯತ್ತ ಸರ್ಕಾರ ಗಮನಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, 2013-14ನೇ ಸಾಲಿಗೆ ಕಬ್ಬಿಗೆ 2400 ಬೆಲೆ ನಿಗದಿಪಡಿಸಿರುವುದು ಸರಿಯಲ್ಲ. ಬದಲಾಗಿ 2800 ರಿಂದ 3000 ರವರೆಗೆ ನಿಗದಿಪಡಿಸಬೇಕು. ಸರ್ಕಾರ ರಚಿಸಿರುವ ಬೆಲೆ ನಿಗದಿ ಆಯೋಗ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಆದ್ದರಿಂದ ಸಕ್ಕರೆ ಕಾರ್ಖಾನೆಗಳಿಗೆ ಸ್ಪಷ್ಟ ಆದೇಶ ನೀಡಿ ಕಬ್ಬು ಬೆಳೆಗಾರರಿಗೆ ಮುಂಗಡ ಹಣ, ಮಧ್ಯಮ ಹಾಗೂ ಕೊನೆಯ ಹಂತದ ಹಣ ನೀಡುವಂತೆ ಸೂಚಿಸಬೇಕು. ದಸರಾ ಮುಗಿದ ತಕ್ಷಣ ಕಬ್ಬಿಗೆ ಪರಿಷ್ಕೃತ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ತೆಂಗು ಬೆಳೆಯು ಕೊಳೆ ರೋಗದಿಂದ ಕಂಗೆಟ್ಟು ಹೋಗಿದ್ದು, ತೆಂಗು ಬೆಳೆ ರೈತರು ಸಂಕಷ್ಟು ಎದುರಿಸುತ್ತಿದ್ದಾರೆ. ಕೇರಳದಲ್ಲಿ ಈ ರೀತಿ ಆದರೆ ಸರ್ಕಾರವೇ ಪರಿಹಾರ ನೀಡುತ್ತದೆ. ಅದರಂತೆ ರಾಜ್ಯದಲ್ಲಿಯೂ ಪ್ರತಿ ತೆಂಗಿನ ಮರಕ್ಕೆ 30 ಸಾವಿರ ಪರಿಹಾರ ನೀಡಬೇಕು. ಜಾನುವಾರುಗಳು ಕಾಲು ಬಾಯಿ ಜ್ವರದಿಂದ ಬಳಲುತ್ತಿವೆ. ಇದರ ಬಗ್ಗೆ ಪ್ರಚಾರ ನೀಡುವ ಬದಲು ರೋಗದ ನಿವಾರಣೆಗೆ ತುರ್ತು ಕ್ರಮವಹಿಸುವುದು ಅಗತ್ಯವಿದೆ. ಅದು ಅಂಟು ರೋಗವಾದ್ದರಿಂದ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಎಚ್ಚರಿಸಿದರು. ರೈತ ಮುಖಂಡರಾದ ಅಶ್ವತ್ಥನಾರಾಯಣ ರಾಜೇ ಅರಸ್, ಕೆ.ಎಸ್. ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement