ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಧ್ವಾನಗಳ ತಾಣ ಯುವ ದಸರಾ

Rashmi Kasaragodu
Updated On : 8 Oct 2013, 12:50 pm

ಕ.ಪ್ರ.ವಾರ್ತೆ    ಮೈಸೂರು    ಅ. 7
ಅಧ್ವಾನ... ಅಧ್ವಾನ... ಅಧ್ವಾನ...
- ಇದು ಈ ಬಾರಿಯ ಯುವ ದಸರಾ ಉದ್ಘಾಟನೆ ಕಾರ್ಯಕ್ರಮದ ಹೈಲೆಟ್ಸ್.
ವಾಹನ ನಿಲ್ಲಿಸಲು ಕಾಸು ಕೊಡಬೇಕು, ಜನಪ್ರತಿನಿಧಿಗಳು ಬಂದು ಕಾರ್ಯಕ್ರಮ ಉದ್ಘಾಟಿಸುವವರೆಗೂ ಜನ ಕಾದರು, ಎರಡು ಬಾರಿ ನಾಡಗೀತೆ ಹಾಡಿಸಿದರು, ದೃಶ್ಯ ಮಾಧ್ಯಮಗಳ ಚಿತ್ರೀಕರಣ ಮತ್ತು ಛಾಯಾಗ್ರಾಹಕರು ಫೋಟೋ ತೆಗೆಯಲು ಸರಿಯಾದ ವ್ಯವಸ್ಥೆ ಇಲ್ಲ, ಯುವ ದಸರಾ ಉಪ ಸಮಿತಿ ಅಧ್ಯಕ್ಷರಿಗೆ ಯಾವ ಕಾರ್ಯಕ್ರಮ ಯಾವತ್ತು, ಕಲಾವಿದರು ಯಾರು ಎಂಬುದುರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ, ಉಪಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಇಲ್ಲ...
ಹೀಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಅಷ್ಟರ ಮಟ್ಟಿಗೆ ಈ ಬಾರಿಯ ಯುವ ದಸರಾ ಅಧ್ವಾನದ ಕೂಪವಾಗಿತ್ತು. ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾ ವ್ಯವಸ್ಥೆ ಮಾಡಲಾಗಿತ್ತು. ಸೋಮವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಬೇಕಿತ್ತು. ಆದರೆ, ಚಾಮರಾಜನಗರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾತ್ರಿ 8 ಗಂಟೆಯಾದರೂ ಬರಲಿಲ್ಲ. ಜನ ಕಾದು ಕಾದು ಸುಸ್ತಾದರು.
ದೃಶ್ಯ ಮಾಧ್ಯಮ ಮತ್ತು ಛಾಯಾಗ್ರಾಹಕರು ನಿಂತುಕೊಳ್ಳಲು ಈ ಬಾರಿ ವೇದಿಕೆ ನಿರ್ಮಿಸಿರಲಿಲ್ಲ. ಟೇಬಲ್ ಹಾಕಿಕೊಡುವಂತೆ ಆಯೋಜಕರನ್ನು ಕೇಳಿದರೂ ಅವರು ಕೇಳಲಿಲ್ಲ. ಜಿಲ್ಲಾಧಿಕಾರಿ ಸಿ.ಶಿಖಾ, ಎಂಡಿಎ ಆಯುಕ್ತ ಎಸ್. ಪಾಲಯ್ಯ ಮತ್ತು ಇತರೆ ಅಧಿಕಾರಿಗಳು ಸಮಸ್ಯೆ ಕೇಳಲು ಬರಲೇ ಇಲ್ಲ. ಅರಸು ಬೋರ್ಡಿಂಗ್ ಶಾಲಾ ಆವರಣದಲ್ಲಿ ವಾಹನ ನಿಲುಗಡೆಗೆ 10, 15, 20 ರು. ವಸೂಲಿ ಮಾಡಲಾಗುತ್ತಿತ್ತು.
ಉಸ್ತುವಾರಿ ಸಚಿವರು ಬಂದರು....: ಅಂತೂ ರಾತ್ರಿ 8ರ ನಂತರ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾರ್ಯಕ್ರಮ ಸ್ಥಳಕ್ಕೆ ಬಂದರು. ಮಾಧ್ಯಮದವರು ಪ್ರತಿಭಟಿಸುತ್ತಿದ್ದಂತೆ ನಾಳೆ ಎಲ್ಲ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು. ಈಗ ಟೇಬಲ್ ಹಾಕಿಸುವುದಾಗಿ ವೇದಿಕೆ ಹತ್ತಿದ್ದರು. ಆದರೆ, ಟೇಬಲ್ ಮಾತ್ರ ಬರಲೇ ಇಲ್ಲ. ಇದರಿಂದ ಆಕ್ರೋಶಗೊಂಡ ದೃಶ್ಯ ಮಾಧ್ಯಮದವರು ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು 8.15ಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಲು ಮೈಕ್ ತೆಗೆದುಕೊಳ್ಳುತ್ತಿದ್ದಂತೆ ಪ್ರೇಕ್ಷಕರು ಜೋರಾಗಿ ಕಿರಿಚಲು ಆರಂಭಿಸಿದರು. ಇದರಿಂದ ಕುಪಿತಗೊಂಡ ಶ್ರೀನಿವಾಸಪ್ರಸಾದ್ ಅವರು, ಯುವಜನತೆ ಅರ್ಥ ಮಾಡಿಕೊಳ್ಳಬೇಕು. 1 ಕೋಟಿ ನೀಡಿ ಯುವ ದಸರಾ ಮಾಡಿಸಿದ್ದೇವೆ. 6 ದಿನ ಕಾರ್ಯಕ್ರಮ ನಡೆಯಲಿದ್ದು ನೋಡಿ ಆನಂದಿಸಬೇಕು. ಕಿರುಚುವುದರಿಂದ ಏನು ಪ್ರಯೋಜನ ಇಲ್ಲ. 10-15  ನಿಮಿಷ ಸಭಾ ಕಾರ್ಯಕ್ರಮ ನಡೆಯಲು ಬಿಡಿ. ಮೈಸೂರು ಇತಿಹಾಸ, ದಸರಾ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದರು.



ಕಾರ್ಯಕ್ರಮದ ಹಾದಿ...
ರಾತ್ರಿ 8.30ಕ್ಕೆ ಕೆ.ಸಿ. ಪುಷ್ಪ ಮತ್ತು ತಂಡದವರಿಂದ ಸ್ವಾಗತ ನೃತ್ಯ, ಅಂಧ ಮಕ್ಕಳ ಶಾಲೆ, ವಿಶೇಷ ವಿದ್ಯಾರ್ಥಿ ಅಲೋಕ್ ನೃತ್ಯ, ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಾಲೇಜು ವಿದ್ಯಾರ್ಥಿಗಳು, ಮೈಸೂರು ತಾಲೂಕು ಗ್ರಾಮೀಣ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರಾತ್ರಿ 9.30 ನಂತರ ಬಾಲಿವುಡ್ ಹಿನ್ನೆಲೆ ಗಾಯಕ ಶಾನ್ ಮತ್ತು ತಂಡದಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement