ಕ್ಯಾತಮಾರನಹಳ್ಳಿಯಲ್ಲಿ ಆಟೋ ಚಾಲಕನ ಕೊಲೆ
ಕ.ಪ್ರ.ವಾರ್ತೆ ಮೈಸೂರು ಅ. 7
ಆಟೋ ಚಾಲಕರೊಬ್ಬರನ್ನು ಕೊಲೆ ಮಾಡಿರುವ ಘಟನೆ ಉದಯಗಿರಿಯ ಕ್ಯಾತಮಾರನಹಳ್ಳಿಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಗೌಸಿಯಾನಗರ ನಿವಾಸಿ ಸೈಯದ್ ಅಕ್ರಂ ಅ. ಡಾನ್ (38) ಕೊಲೆಯಾದವರು. ಇವರು ಆಟೋ ಚಾಲನೆ ಮಾಡಿಕೊಂಡಿದ್ದರು. ಮೊದಲ ಪತ್ನಿಗೆ ವಿಚ್ಚೇದನ ನೀಡಿ, ಮುನಿರಾ ಎಂಬವರನ್ನು 2ನೇ ಮದುವೆ ಆಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ.
ಸೈಯದ್ ಅಕ್ರಂ ಮೃತದೇಹವು ಕ್ಯಾತಮಾರನಹಳ್ಳಿಯ ಅಂಬಿಕಾ ವೈನ್ಸ್ ಸಮೀಪ ಪಾಳು ಜಾಗದಲ್ಲಿ ಪತ್ತೆಯಾಗಿದೆ. ಯಾವುದೋ ಆಯುಧದಿಂದ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. 2ನೇ ಪತ್ನಿ ಮುನಿರಾ ನಡತೆ ಬಗ್ಗೆ ಅಕ್ರಂ ಅನುಮಾನ ಪಡುತ್ತಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.