ಸ್ವಚ್ಛತಾ ಅಭಿಯಾನಕ್ಕೆ ಧರ್ಮಗುರುಗಳಿಂದ ಚಾಲನೆ
ಕ.ಪ್ರ.ವಾರ್ತೆ ಮೈಸೂರು ಅ. 7
ದೇಶದ ಎರಡನೇ ಸ್ವಚ್ಛತಾ ನಗರ ಎಂಬ ಖ್ಯಾತನಾಮ ಹೊಂದಿರುವ ಪಾರಂಪರಿಕ ನಗರಿ ಮೈಸೂರನ್ನು ದಸರಾ ಮಹೋತ್ಸವದಲ್ಲಿ ಮತ್ತಷ್ಟು ಸ್ವಚ್ಛವಾಗಿಡಲು ಸೋಮವಾರ ಹಮ್ಮಿಕೊಂಡಿದ್ದ ಶುಚಿತ್ವ ಸಂಗಮ ರ್ಯಾಲಿಗೆ ವಿವಿಧ ಧರ್ಮಗುರುಗಳು ಚಾಲನೆ ನೀಡಿದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ರ್ಯಾಲಿಗೆ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಇವರೊಟ್ಟಿಗೆ ಮುಸ್ಲಿಂ ಸಮುದಾಯದ ಸರ್ಖಾಜಿ ಮೌಲಾನ ಸೈಯದ್ ಉಸ್ಮಾನ್ ಷರೀಫ್, ಕ್ರೈಸ್ತ ಸಮುದಾಯದ ಬಿಷಪ್ ಥಾಮಸ್ ಅಂಥೋಣಿ ವಾಳಪಿಳ್ಳೈ, ಬೌದ್ಧ ಧರ್ಮದ ಶ್ರೀ ಮನೋರಖ್ಖಿತ ಭಂತೇಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಿವಯೋಗಿ ಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮಡಿವಾಳ ಮಠದ ಶ್ರೀ ಮಡಿವಾಳೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ದಸರಾ ಸ್ವಚ್ಛತೆ ಉಪಸಮಿತಿ ಹಾಗೂ ನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಗೆ ಸರ್ವಧರ್ಮ ಗುರುಗಳು ಚಾಲನೆ ಕೊಟ್ಟ ಬಳಿಕ ಚಾಮರಾಜ ವೃತ್ತ, ದೊಡ್ಡ ಗಡಿಯಾರ, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಾರ್ಗದುದ್ದಕ್ಕೂ ಸ್ವಚ್ಛತೆ ಬಗೆಗಿನ ನಾಮಫಲಕ ಪ್ರದರ್ಶಿಸಲಾಯಿತು. ಪ್ರತಿದಿನವು ತಮ್ಮ ತಮ್ಮ ಮನೆಮುಂದೆ ಸ್ವಚ್ಛತೆ ಕಾಪಾಡುವುದು, ಮನೆಯಲ್ಲಿ ತಯಾರಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣಗಿದ ಪದಾರ್ಥಗಳ ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡುವುದು, ನೀರು ಪೋಲು ಮಾಡದಂತೆ ಎಚ್ಚರವಹಿಸುವ ಬಗೆಗೆ ಸಾರ್ವಜನಿಕರಿಗೆ ಕರಪತ್ರ ಹಂಚಲಾಯಿತು.
ಸಮಾಜದಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಮುನ್ನುಡಿ ಬರೆದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಗರದ ವಿವಿಧ ಕಾಲೇಜುಗಳ ಸೇವಾ ಪ್ರತಿನಿಧಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಮಹಾರಾಜ ಕಾಲೇಜು, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ಸಂತ ಜೋಸೆಫ್ ಕಾಲೇಜು, ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಜೆಎಸ್ಎಸ್ ಮಹಿಳಾ ಕಾಲೇಜು, ಶಾರದಾ ವಿಲಾಸ ವಿಜ್ಞಾನ ಕಾಲೇಜು, ಸಿದ್ದಾರ್ಥನಗರ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ ಪ್ರಥಮ ದರ್ಜೆ ಕಾಲೇಜುಗಳ ಎನ್ಎಸ್ಎಸ್ ಘಟಕ ರ್ಯಾಲಿಯಲ್ಲಿ ಪಾಲ್ಗೊಂಡಿತ್ತು. ಸುಮಾರು 280 ಸೇವಾ ಪ್ರತಿನಿಧಿಗಳಿಗೆ ಟೀಷರ್ಟ್, ಕ್ಯಾಪ್ ನೀಡಲಾಯಿತು.
ಪೊರಕೆಯೊಂದಿಗೆ ಬಂದಿದ್ದ ಪೌರಕಾರ್ಮಿಕರು: ಸ್ವಚ್ಛತಾ ಅಭಿಯಾನವು ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಮಾತ್ರ ಆಯೋಜಿಸಲಾಗಿತ್ತು. ಆದರೆ, ನಗರಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಮವಸ್ತ್ರದೊಂದಿಗೆ, ಕೈಯಲ್ಲಿ ಪೊರಕೆ ಹಿಡಿದು ಪಾಲ್ಗೊಂಡಿದ್ದರು. ಅಭಿಯಾನದಲ್ಲೂ ಸ್ವಚ್ಛತೆಯನ್ನು ಕಾರ್ಯರೂಪಕ್ಕೆ ತಂದು ಎಲ್ಲರ ಮೆಚ್ಚುಗೆಗೂ ಪಾತ್ರರಾದರು. ಪೌರಕಾರ್ಮಿಕರೆಲ್ಲರಿಗೂ ದಾರಿಯುದ್ದಕ್ಕೂ ಸಮಾಜ ಸೇವಕ ಸಂಗಮೇಶ ನೀರು ಒದಗಿಸಿ ಮಾನವೀಯತೆ ಮೆರೆದರು. ನಗರದ ಸ್ವಚ್ಛತೆ ಕಾಪಾಡಲು ಮುಂಚೂಣಿಯಲ್ಲಿ ನಿಲ್ಲಬೇಕಾದದ್ದು ನಗರಪಾಲಿಕೆಯ ಆದ್ಯ ಕರ್ತವ್ಯ.
ಆದರೆ ಪಾಲಿಕೆಯಲ್ಲಿ ಪರಿಸರ ಎಂಜಿನಿಯರುಗಳಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ರ್ಯಾಲಿ ಆರಂಭಗೊಳ್ಳುವವರೆಗೆ ಮುಂಚೂಣಿಯಲ್ಲಿದ್ದರು. ಆರಂಭಗೊಂಡ ನಂತರ ಹಿಂದೆಯೇ ಉಳಿದರು. ಜನರಿಗೆ ಮಾರ್ಗದರ್ಶನ ನೀಡಬೇಕಾದ ಇವರೇ ಹೀಗೆ ಮಾಡಿದರೆ ಇನ್ನು ರ್ಯಾಲಿ ಹಮ್ಮಿಕೊಂಡ ಉದ್ದೇಶವಾದರೂ ಏನು ಎಂಬುದು ಅಲ್ಲಿದ್ದವರ ಪ್ರಶ್ನೆಯಾಗಿತ್ತು.
ಮೇಯರ್ ಎನ್.ಎಂ. ರಾಜೇಶ್ವರಿ, ಉಪಮೇಯರ್ ವಿ. ಶೈಲೇಂದ್ರ, ಪಾಲಿಕೆ ಸದಸ್ಯರಾದ ಗಿರೀಶ್ ಪ್ರಸಾದ್, ಮಹದೇವಮ್ಮ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್, ಸ್ವಚ್ಛತಾ ಉಪಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಉಪಾಧ್ಯಕ್ಷ ಜೆ.ಎನ್. ಲಕ್ಷ್ಮಣ್, ನವೀನ್ಕುಮಾರ್, ಕಾರ್ಯಾಧ್ಯಕ್ಷ ಆರ್. ಲೋಕನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದರು.