ಅಂತರ್ಜಲ ಹೆಚ್ಚಿಸಲು ಕೆರೆಗಳ ಅಭಿವೃದ್ಧಿ: ಸ್ವಾಮೀಗೌಡ
ಕ.ಪ್ರ.ವಾರ್ತೆ ರಾವಂದೂರು ಅ. 8
ಕೆರೆಗಳ ಅಭಿವೃದ್ಧಿಪಡಿಸಿ ಅಂತರ್ಜಲವನ್ನು ಹೆಚ್ಚಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಬಿ.ಎಸ್. ಸ್ವಾಮೀಗೌಡ ಹೇಳಿದರು.
ತಾಲೂಕಿನ ರಾವಂದೂರು ನಿಲಂಗಾಲ ಮತ್ತು ಎನ್. ಶೆಟ್ಟಹಳ್ಳಿ ಗ್ರಾಮದ ಕಾರೆಕಟ್ಟೆ ಕೆರೆ ಅಭಿವೃದ್ಧಿ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಮಾಡುವುದರಿಂದ ಕೆರೆ ಸುತ್ತಮುತ್ತಲಿನ ಅನೇಕ ರೈತರಿಗೆ ಅನುಕೂಲವಾಗಲಿದ್ದು, ಅಂತರ್ಜಲದ ಮಟ್ಟ ಕೂಡ ಹೆಚ್ಚಲಿದೆ ಎಂದು ತಿಳಿಸಿದರು.
ಜಿಪಂ ಎಂಜಿನಿಯರ್ ತಿಮ್ಮಪ್ಪ ಮಾತನಾಡಿ, ಈ ಕೆರೆಗಳ ಅಭಿವೃದ್ಧಿಗೆ 50 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಅಂದಾಜು ಯೋಜನೆ ರೂಪಿಸಲಾಗಿದ್ದು, ಕೆರೆಗೆ ಹೋಗುವ ರಸ್ತೆ ನಿರ್ಮಾಣ, ಕೆರೆ ಒತ್ತುವರಿ ತೆರವುಗೊಳಿಸುವುದು, ಸಂಪೂರ್ಣವಾಗಿ ರೈತರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಜಯಣ್ಣ, ಎಸ್.ಜೆ. ವಿಜಯಕುಮಾರ್, ಮಹದೇವ್, ಎನ್ಆರ್ಐಜಿ ಜೆ.ಜಿ. ಲೋಕೇಶ್, ಪಿಡಿಒ ಬಸವರಾಜು, ವಾಮನರಾವ್, ಗುತ್ತಿಗೆದಾರ ಅನಂತ್ ಇದ್ದರು.