ಅನೈತಿಕ ಸಂಬಂಧ; ಪತ್ನಿ ಕೊಲೆ
ಕ.ಪ್ರ.ವಾರ್ತೆ ಮೈಸೂರು ಅ. 8
ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜೆಎಲ್ಬಿ ರಸ್ತೆಯಲ್ಲಿರುವ ಹೊಟೇಲ್ ಗುರು ರೆಸಿಡೆನ್ಸಿ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ನಿವಾಸಿ ಪ್ರಿಯಾ(32) ಕೊಲೆಯಾದವರು. ಕೊಲೆ ಮಾಡಿದ ಪ್ರಿಯಾ ಪತಿ ಅಮಿತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಾ ಮೈಸೂರಿನ ರಿಗಾಲೀಸ್ ಹೊಟೇಲ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಅಮಿತ್ ಕಾರು ಚಾಲನೆ ಮಾಡಿಕೊಂಡಿದ್ದ. ಈ ಇಬ್ಬರು 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿ, ಬೆಳಗೊಳದಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಬೆಳಗ್ಗೆ 6ಕ್ಕೆ ಕರ್ತವ್ಯಕ್ಕೆ ಹಾಜರಾಗಲು ಬೆಳಗ್ಗೆ 5.30ರಲ್ಲಿ ಬಸ್ಸಿನಲ್ಲಿ ಪ್ರಿಯಾ ಮೈಸೂರಿಗೆ ಬಂದರು. ಅದೇ ಬಸ್ಸಿನಲ್ಲಿ ಅಮಿತ್ ಸಹ ಬಂದಿದ್ದು, ಇಬ್ಬರು ಮಾರ್ಗ ಮಧ್ಯೆ ಜಗಳವಾಡಿದ್ದಾರೆ. ದಾಸಪ್ಪ ವೃತ್ತದ ಬಳಿ ಬಸ್ ಇಳಿದು ಹೊಟೇಲ್ನತ್ತ ಹೋಗುತ್ತಿದ್ದಾಗ ಈ ವೇಳೆ ಅಮಿತ್ ತಾನು ತಂದಿದ್ದ ಕುಡುಗೋಲಿನಿಂದ ಪ್ರಿಯಾಳ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಿಯಾ ಓಡಲು ಆರಂಭಿಸಿದಾಗ ಅಟ್ಟಿಸಿಕೊಂಡ ಹೋದ ಅಮಿತ್ ಗುರು ರೆಸಿಡೆನ್ಸಿ ಬಳಿಯಿರುವ ಡಾಕ್ಟರ್ಸ್ ಕಾಲೋನಿ ಬಳಿ ಮನಬಂದಂತೆ ಪ್ರಿಯಾಳ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಸಮೀಪದ ದೇವರಾಜ ಪೊಲೀಸ್ ಠಾಣೆಗೆ ತೆರಳಿ ಅಮಿತ್ ಶರಣಾಗಿದ್ದಾನೆ. ಯುವಕನೊಬ್ಬನೊಂದಿಗೆ ಪ್ರಿಯಾ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಅಮಿತ್ ಪೊಲೀಸರು ಎದುರು ತಪ್ಪು ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯ ಬಳಿ ಆರೋಪಿ ಅಮಿತ್ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ದೇವರಾಜ ಉಪ ವಿಭಾಗದ ಎಸಿಪಿ ಜಯಮಾರುತಿ, ದೇವರಾಜ ಠಾಣೆ ಇನ್ಸ್ಪೆಕ್ಟರ್ ಎಚ್.ಎಂ. ಕಾಂತರಾಜು, ಎಸ್ಐಗಳಾದ ಬಾಲಕೃಷ್ಣ, ಲೇಪಾಕ್ಷ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.