'ಅರ್ಥಶಾಸ್ತ್ರ ವಿಭಾಗ ಸ್ವತಂತ್ರಕ್ಕೆ ಚಿಂತನೆ'
ಕ.ಪ್ರ.ವಾರ್ತೆ ಮೈಸೂರು ಅ. 8
ಅರ್ಥಶಾಸ್ತ್ರ ಅಧ್ಯಯನ ವಿಭಾಗವನ್ನು ಸ್ವತಂತ್ರಗೊಳಿಸಿ ಚಿಂತಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಮಾನಸಗಂಗೋತ್ರಿ ಇಎಂಎಂಆರ್ಸಿ ಸಭಾಂಗಣದಲ್ಲಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಯೋಜನಾ ವೇದಿಕೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಂದಾ, ಬಹದ್ದೂರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಮೈಸೂರು ವಿವಿ ಸ್ಕೂಲ್ ಆಫ್ ಎಕನಾಮಿಕ್ಸ್ ಮಾಡಲಾಗುವುದು ಎಂದರು. ಯೋಜನಾ ವೇದಿಕೆ ಮೂಲಕ ಬಜೆಟ್ ಕುರಿತು ಚರ್ಚೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅರ್ಥಶಾಸ್ತ್ರ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ನೀಡಬೇಕು. ಅರ್ಥಶಾಸ್ತ್ರಜ್ಞರಾದ ನೀವು ಸಲಹೆಗಳನ್ನು ನೀಡಿದರೆ ಸರ್ಕಾರಕ್ಕೆ ಕಳುಹಿಸಲಾಗುವುದು. ಇದರಿಂದ ರಾಜ್ಯದ ಜನತೆಗೆ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.
ವಿವೇಕಾನಂದ ಯೂತ್ ಮೂವ್ಮೆಂಟ್ನ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ನಮ್ಮ ದೇಶ ಮತ್ತು ರಾಜ್ಯದಲ್ಲಿ ರೂಪಿಸಲಾಗುವ ಯೋಜನೆಗಳು ಹಾಸ್ಯಾಸ್ಪದವಾಗಿವೆ. ಹಲವು ಯೋಜನೆಗಳು ರಾಜಕೀಯ ಲಾಭಕ್ಕಾಗಿ ರೂಪಿಸಲಾಗಿದೆ ಎಂದು ಹೇಳಿದರು. ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಡಿ.ಎಸ್. ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.