ಮೂಡಲಬೀಡು: ಕಾಲು, ಬಾಯಿ ಜ್ವರಕ್ಕೆ ರಾಸುಗಳ ಬಲಿ
ಕ.ಪ್ರ.ವಾರ್ತೆ ಸಾಲಿಗ್ರಾಮ್ಣ ಅ. 8
ಕಾಲು, ಬಾಯಿ ಜ್ವರವು ಉಲ್ಬಣಗೊಂಡು ಜಾನುವಾರುಗಳು ಸರಣಿ ಸಾಲಿನಲ್ಲಿ ಮೃತಪಡುತ್ತಿರುವ ಘಟನೆ ಕೆ.ಆರ್. ನಗರ ತಾಲೂಕಿನ ಮೂಡಲಬೀಡು ಗ್ರಾಮದಲ್ಲಿ ಕಂಡುಬಂದಿದೆ.
ಕಳೆದ 20 ದಿನಗಳಿಂದಲೂ ಮೂಡಲಬೀಡು ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲು, ಬಾಯಿ ಜ್ವರವು ಕಾಣಿಸಿಕೊಂಡು ಇಲ್ಲಿಯವರೆಗೂ ಸುಮಾರು ಹತ್ತಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದು, ಲಕ್ಷಾಂತರ ರು. ನಷ್ಟವುಂಟಾಗಿದೆ.
ಈ ಘಟನೆಯಿಂದ ಎಚ್ಚೆತ್ತುಕೊಂಡ ಪಶು ಇಲಾಖೆಯ ಅಧಿಕಾರಿಗಳು ಕಳೆದ ಹತ್ತು ದಿನಗಳಿಂದಲೂ ನಿರಂತರವಾಗಿ ಗ್ರಾಮದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುತ್ತಿದ್ದಾರೆ. ಆದರೂ ಸಹ ಗ್ರಾಮದ ಗೋಪಾಲೇಗೌಡರಿಗೆ ಸೇರಿದ ಎಚ್.ಎಫ್. ತಳಿಯ ಸುಮಾರು 30 ಸಾವಿರಕ್ಕೂ ಅಧಿಕ ಬೆಲೆಬಾಳುವ ರಾಸು ಈಗ ಮೃತಪಟ್ಟಿದೆ.
ಜಾನುವಾರುಗಳನ್ನೆ ಸಾಕಿ ಆಮೂಲಕ ತಮ್ಮ ಜೀವನವನ್ನು ನಿರ್ವಹಣೆ ಮಾಡುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಷ್ಟೆಲ್ಲ ಘಟನೆಗಳು ಗ್ರಾಮದಲ್ಲಿ ನಡೆದರೂ ಯಾವುದೆ ಚುನಾಯಿತ ಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಕೆಲಸವನ್ನು ಮಾಡುತ್ತಿಲ್ಲವೆಂದು ನೊಂದ ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈ ಗ್ರಾಮವಲ್ಲದೆ ಸಾಲಿಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತಿದ್ದು, ಅದನ್ನು ನಿಯಂತ್ರಿಸಬೇಕು. ಆ ಮೂಲಕ ಮುಂದಾಗಬಹುದಾದ ಅನಾಹುತಗಳನ್ನು ಪಶುವೈದ್ಯ ಇಲಾಖೆಯವರು ತಡೆಗಟ್ಟಬೇಕು ಹಾಗೂ ಸರ್ಕಾರವು ಒಂದು ಕುರಿ ಸತ್ತರೆ ಅದಕ್ಕೆ ಇಂತಿಷ್ಟು ಪರಿಹಾರವೆಂದು ನಿಗದಿಮಾಡಿದೆ.
ಆದರೆ ಜಾನುವಾರ ಸತ್ತರೆ ಅದಕ್ಕೆ ಪರಿಹಾರವನ್ನು ನೀಡುವ ಕಾಯಂಕ್ಕೆ ಸರ್ಕಾರವು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.