ವಕೀಲರ ಸಂಘಕ್ಕೆ ಹಂಗಾಮಿ ಅಧ್ಯಕ್ಷರು ಆಯ್ಕೆಯಾಗಿಲ್ಲ
ಕೆ.ಆರ್. ನಗರ: ವಕೀಲರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಬಳ್ಳೂರು ಮೂರ್ತಿ ಆಯ್ಕೆಯಾಗಿದ್ದಾರೆ ಎಂದು ಕೆಲವು ವಕೀಲರು ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ನಿಯಮ ಬಾಹಿರ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ದುರ್ಗೇಶ್, ಕಾರ್ಯದರ್ಶಿ ಡಿ.ಆರ್. ರಮೇಶ್ ಹೇಳಿದ್ದಾರೆ.
2012ರ ಫೆ. 25ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈಗಿರುವ ಆಡಳಿತ ಮಂಡಳಿಯನ್ನೆ ಸಂಘದ ಬೈಲಾ ಪ್ರಕಾರ ಆಯ್ಕೆ ಮಾಡಲಾಗಿದೆ. ನಾನು ಸೇರಿದಂತೆ ಎಲ್ಲ ಪದಾಧಿಕಾರಿಗಳು ಸರ್ವ ಸದಸ್ಯರ ತೀರ್ಮಾನದಂತೆ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಸಾರ್ವಜನಿಕ ವಲಯದಲ್ಲಿ ಅನಗತ್ಯ ಗೊಂದಲ ಉಂಟು ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂಘದ ಕೆಲವು ವಕೀಲರು ಗುಂಪುಗಾರಿಕೆ ಮಾಡಿಕೊಂಡು ಸಂಘದ ಹಿತಾಶಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದು, ಇದರಿಂದ ಸಂಘದ ಘನತೆಗೆ ಕುಂದುಂಟಾಗಿದೆ. ಜತೆಗೆ ಪತ್ರಿಕೆಗಳಿಗೆ ಬಳ್ಳೂರು ಮೂರ್ತಿ ಹಂಗಾಮಿ ಅಧ್ಯಕ್ಷರಾಗಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿ ಗೊಂದಲವುಂಟು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಸಂಘದ ವತಿಯಿಂದ ನಕಲಿ ದಾಖಲೆ ಸೃಷ್ಟಿಸಿ ವಕೀಲರ ಸಂಘದ ಮೊಹರನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರ ಪರಿಷತ್ಗೆ ದೂರು ನೀಡಲು ನಿರ್ದರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅಧ್ಯಕ್ಷರು, ಈಗಿರುವ ಸಂಘವೇ ಅಧಿಕೃತ ಎಂದು ಸ್ಪಷ್ಟನೆ ನೀಡಿದ್ದಾರೆ.