'ಸ್ವಚ್ಛತೆ ಬಗ್ಗೆ ಗ್ರಾಮೀಣರಲ್ಲಿ ಅರಿವು ಅಗತ್ಯ'
ಕ.ಪ್ರ.ವಾರ್ತೆ ಮೂಗೂರು ಅ. 8
ರಾಷ್ಟ್ರೀಯ ಸೇವಾ ಯೋಜನೆಯ ಆಶಯಗಳನ್ನು ಈಡೇರಿಸುವುದರ ಜತೆಗೆ ಗ್ರಾಮೀಣ ಜನರ ಆರೋಗ್ಯ, ಸ್ವಚ್ಛತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಮೂಗೂರು ಗ್ರಾಪಂ ಅಧ್ಯಕ್ಷ ಜಗದೀಶ್ಮೂರ್ತಿ ಹೇಳಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೂಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಗ್ರಾಮಗಳ ಸ್ವಚ್ಛ ಪರಿಸರಕ್ಕಾಗಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಲಿದ್ದಾರೆ. ಜನರು ಸ್ವಚ್ಛತೆಯ ಬಗ್ಗೆ ತಿಳಿದುಕೊಂಡು ಆ ಮೂಲಕ ಉತ್ತಮ ಆರೋಗ್ಯಕರ ಪರಿಸರ ನಿರ್ಮಾಣ ಮಾಡಿಕೊಂಡಾಗ ಮಾತ್ರ ಮಾದರಿ ಗ್ರಾಮವಾಗಲು ಸಾಧ್ಯ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಎಂ. ಬಸವಣ್ಣ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಮಾತನಾಡಿದರು.
ತಾಪಂ ಸದಸ್ಯೆ ಪುಟ್ಟಮಾದಮ್ಮ, ಕಾಲೇಜು ಪ್ರಾಂಶುಪಾಲ ಬಿ. ಮಹದೇವ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಪಿ. ಮರಿಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಮಹೇಶ, ಉಪ ಪ್ರಾಂಶುಪಾಲ ಜಗದೀಶ್ಮೂರ್ತಿ, ನೀರು ಬಳಕೆದಾರರ ಮಹಾ ಮಂಡಳದ ಕಾರ್ಯದರ್ಶಿ ನಾಗರಾಜು, ಗ್ರಾಪಂ ಸದಸ್ಯರಾದ ಕೆ. ಶೇಷಣ್ಣ, ದುಂಡೇಗೌಡ, ಎಂ.ಪಿ. ನಿಂಗಪ್ಪ, ಶೀಲಾಮಣಿ, ಶಿಬಿರಾಧಿಕಾರಿ ಎನ್. ಜವರಯ್ಯ ಎಸ್. ರಾಜೇಶ್ ಇದ್ದರು.
ವೈದ್ಯಕೀಯ ಆರೋಗ್ಯ ಉಚಿತ ತಪಾಸಣಾ ಶಿಬಿರ: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರದ ಅಂಗವಾಗಿ ಅ.9ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಿದೆ. ಮಧ್ಯಾಹ್ನ ಶಾಲಾ ಆವರಣದಲ್ಲಿ ಆರೋಗ್ಯ ಕುರಿತು ವಿವಿಧ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರು ತಪಾಸಣಾ ಶಿಬಿರ ಹಾಗೂ ಉಪನ್ಯಾಸದ ಪ್ರಯೋಜನ ಪಡೆಯುವಂತೆ ಶಿಬಿರಾಧಿಕಾರಿ ಎನ್. ಜವರಯ್ಯ ತಿಳಿಸಿದ್ದಾರೆ.