ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೇಮಾಮಾಲಿನಿ ನೃತ್ಯ ವೈಭವ

Rashmi Kasaragodu
Updated On : 9 Oct 2013, 12:14 pm

ಕ.ಪ್ರ.ವಾರ್ತೆ   ಮೈಸೂರು   ಅ. 8
ಅಂತಾರಾಷ್ಟ್ರೀಯ ಪ್ರಖ್ಯಾತ ನೃತ್ಯಗಾರ್ತಿ ಹಾಗೂ ನಟಿ ಹೇಮಾಮಾಲಿನಿ ಅವರು ಮಂಗಳವಾರ ಅರಮನೆ ಆವರಣದಲ್ಲಿ ನೃತ್ಯರೂಪಕ ನಡೆಸಿಕೊಟ್ಟರು.
ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಉಪಸಮಿತಿ ವತಿಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಸಮುದ್ರ ಮಥನ ಕುರಿತಾದ ಅದ್ಭುತ ನೃತ್ಯವನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ತಂಡದ ಸಹಕಲಾವಿದರ ಸಾಥ್ ನೀಡಿದರು. ಇದಕ್ಕೂ ಮುನ್ನ ಬಾನಂದೂರು ಕೆಂಪಯ್ಯ ಮತ್ತು ತಂಡದವರು ಜಾನಪದ ಸಂಗೀತವನ್ನೂ, ಚಿಕ್ಕಮರಿಯಪ್ಪ ಹಾಗೂ ಕಂಸಾಳೆ ಮಹದೇವಯ್ಯ ತಂಡದವರು ಕಂಸಾಳೆ ನಡೆಸಿಕೊಟ್ಟರು.
ಕಾರ್ಯಕ್ರಮದ ಆರಂಭದ ಸಮಯದಲ್ಲಿ ಮಳೆ ಬಿದ್ದ ಕಾರಣ ವೇದಿಕೆ ಕಾರ್ಯಕ್ರಮವನ್ನು ಅರಮನೆಯ ಅಂಬಾವಿಲಾಸ ಮಹಾದ್ವಾರದ ಬಳಿ ಆಯೋಜಿಸಲಾಯಿತು. ಆದಾದ ನಂತರ ಬಾನಂದೂರು ಕೆಂಪಯ್ಯ ಅವರ ಕಾರ್ಯಕ್ರಮ ಮುಖ್ಯ ವೇದಿಕೆಯಲ್ಲಿ ನಡೆಯಿತು.
ಕನಸಿನ ಕನ್ಯೆ ಹೇಮಾಮಾಲಿನಿ ಅವರ ನೃತ್ಯ ನೋಡಲು ಪ್ರೇಕ್ಷಕರ ದಂಡು ಅರಮನೆಯಲ್ಲಿ ನೆರದಿದ್ದ ಕಾರಣ, ಸೀಟಿಗೆ ಕೊರತೆ ಕಂಡುಬಂತು. ಜನಪ್ರತಿನಿಧಿಗಳು ಹಾಗೂ ಪೊಲೀಸರ ಕುಟುಂಬದ ಸದಸ್ಯರಿಗೆ ಸೀಟು ಕಾದಿರಿಸಿದ ಕಾರಣ ಗೋಲ್ಡ್ ಕಾರ್ಡ್ ಪಡೆದವರು ಬೇರೆಡೆಯಿಂದ ತಾವೇ ಪ್ಲಾಸ್ಟಿಕ್ ಕುರ್ಚಿಗಳನ್ನು ತಂದು ಕೂರುವುದು ಕಂಡುಬಂತು.
ಜಿಲ್ಲಾ ಉಸ್ತುವಾರಿ ಸಚಿವಿ ವಿ. ಶ್ರೀನಿವಾಸಪ್ರಸಾದ್, ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ, ಶಾಸಕರಾದ ವಾಸು, ಗೋ. ಮಧುಸೂದನ್, ಜಿಲ್ಲಾಧಿಕಾರಿ ಸಿ. ಶಿಖಾ, ಡಾ. ಸಿ.ಜಿ. ಬೆಟ್ಸೂರ್ಮಠ್ ಇದ್ದರು. ಉಪಸಮಿತಿ ಅಧ್ಯಕ್ಷ ಕೆ.ಆರ್. ಮೋಹನ್ಕುಮಾರ್ ಸ್ವಾಗತಿಸಿದರು.
ವಿವಿಧೆಡೆ ಕಾರ್ಯಕ್ರಮ: ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಂಗಲೀರಿಮ ಎಂ.ಆರ್. ಬಸಪ್ಪ ಅವರ ವೀರಗಾಸೆ, ತುಮಕೂರಿನ ಮಂಜುನಾಥ್ ಅವರಿಂದ ಸುಗಮ ಸಂಗೀತ ಹಾಗೂ ಬಾಗಲಕೋಟೆಯ ಕೃತಿಕಾ ದಯಾನಂದ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ನಜರ್ಬಾದಿನ ಕುಪ್ಪಣ್ಣ ಪಾರ್ಕ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಮರಾಜನಗರದ ಎಂ. ಮಂಜುನಾಥ್ ಅವರಿಂದ ಸಂಗಮ ಸಂಗೀತ ಹಾಗೂ ಟಿ. ನರಸೀಪುರದ ಮಾಲಾ ಮತ್ತು ವೃಂದವರಿಂದ ಭಾವಗೀತೆ ನಡೆಯಿತು. ವಿನೋಬರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನವರಾದ ಹೊಂಬಾಳೆ ಪ್ರತಿಭಾ ರಂಗದ ಕಲಾವಿದರು ಸುಗಮ ಸಂಗೀತವನ್ನೂ, ಅನುರಾಧ ವಿಕ್ರಾಂತ್ ಅವರು ನೃತ್ಯ ರೂಪಕವನ್ನೂ ಹಾಗೂ ವಾರಣಾಸಿಯ ಪಂಡಿತ್ ಮಂಜುನಾಥ್ ಅವರು ಹಿಂದೂಸ್ತಾನಿ ಸಂಗೀತ ಗಾಯನ ಹಾಡಿದರು.
ಶಿವರಾಂಪೇಟೆಯ ಚಿಕ್ಕ ಗಡಿಯಾರ ವೃತ್ತದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಮಚಂದ್ರ ಅವರು ಜನಪದ ಸಂಗೀತ ಹಾಗೂ ಮೈಸೂರಿನ ಸಮರ್ಪಣ ತಂಡದವರು ಸಂಗೀತ ವೈವಿಧ್ಯತೆ ನಡೆಸಿಕೊಟ್ಟರು.
ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೈಸೂರಿನ ಮುಕೀಲ್ ಸುನಿಲ್ ಅವರು ಚಂಡೆವಾದನ, ಉತ್ತರ ಕರ್ನಾಟಕದ ಗಣಪತಿ ಭಟ್ ಹಾಸಣಗಿ ಅವರು ಹಿಂದೂಸ್ತಾನಿ ಸಂಗೀತ ಹಾಗೂ ಬೆಂಗಳೂರಿನ ಹಸ್ಮಿತಾ ಗಣೇಶ್ ಅವರು ಭರತನಾಟ್ಯ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement