13 ಪ್ರೌಢಶಾಲೆಗಳಲ್ಲಿ 62 ಕೊಠಡಿ ನಿರ್ಮಾಣ: ಶಾಸಕ ಮಂಜುನಾಥ್
ಹುಣಸೂರು: ತಾಲೂಕಿನ 13 ಪ್ರೌಢಶಾಲೆಗಳಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆಯಡಿ 4.85 ಕೋಟಿ ವೆಚ್ಚದಲ್ಲಿ 62 ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ತಾಲೂಕಿನ ರತ್ನಪುರಿಯ ಪ್ರೌಢಶಾಲಾ ಆವರಣದಲ್ಲಿ ಬುಧವಾರ 44 ಲಕ್ಷ ವೆಚ್ಚದಲ್ಲಿ 5 ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾವು ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದು, ಮುಂದಿನ ದಿನದಲ್ಲಿ ವಿವಿಧ ಯೋಜನೆಯಡಿ ಮತ್ತಷ್ಟು ಕೊಠಡಿ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಲಿದೆ. ಆಯಾ ಶಾಲೆ ಸ್ಥಿತಿಗತಿಗೆ ಅನುಗುಣವಾಗಿ ಶಾಲಾ ಕೊಠಡಿ, ಗ್ರಂಥಾಲಯ ಪ್ರಯೋಗಾಲಯ ಕೊಠಡಿಗಳನ್ನು ಸಹ ನಿರ್ಮಿಸಲಾಗುವುದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಕಾಮಗಾರಿ ನಡೆಯುವ ವೇಳೆ ಮೇಲುಸ್ತುವಾರಿ ವಹಿಸುವ ಮೂಲಕ ಗುಣಮಟ್ಟದ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಅರಸು ಕಲ್ಲಹಳ್ಳಿಗೆ ಪ್ರೌಢಶಾಲೆಗೆ 11 ಕೊಠಡಿ, ಗಾಗೇನಳ್ಳಿ 6 ಕೊಠಡಿ, ಚಿಲ್ಕುಂದ, ಕಟ್ಟೆಮಳಲವಾಡಿ, ಗಾವಡಗೆರೆ, ಬನ್ನಿಕುಪ್ಪೆ, ಹಾಗೂ ರತ್ನಪುರಿಗಳಲ್ಲಿ ತಲಾ ಐದು ಕೊಠಡಿ, ಕೊತ್ತೇಗಾಲ, ಗೆರಸನಹಳ್ಳಿ, ನೇರಳೆ ಕುಪ್ಪೆ, ಹರವೆ ಗ್ರಾಮಗಳಲ್ಲಿ ತಲಾ ಮೂರು ಕೊಠಡಿ ಹಾಗೂ ಬಿಳಿಕೆರೆ ಒಂದು ಕೊಠಡಿಗೆ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಬಿಇಒ ರಾಜಶೇಖರ್, ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್, ರಮೇಶ, ಮಾಜಿ ಸದಸ್ಯರಾದ ಶಿವಗಾಮಿ, ಡಿ.ಕೆ. ಕುನ್ನೇಗೌಡ, ತಾಪಂ ಸದಸ್ಯರಾದ ಪರಮೇಶ್ವರಿ, ಜಯಂತಿ, ಮಾಜಿ ಸದಸ್ಯರಾದ ಸೋಮಶೇಖರ್, ಅಜರ್ಪಾಷಾ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಗೌರಿಪುರ ಮಹದೇವ್, ಪುಟ್ಟಸ್ವಾಮಿ, ಹರಿಹರ ಆನಂದಸ್ವಾಮಿ, ಮುಖಂಡರಾದ ಸುರೇಂದ್ರ, ಧರ್ಮಾಪುರ ರಮೇಶ ಇದ್ದರು.