ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ಧತೆ
ಹುಣಸೂರು: ವಾಲ್ಮೀಕಿ ಜಯಂತಿಯನ್ನು ಅ.18ರಂದು ತಾಲೂಕಿನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲು ಪೂರ್ವಭಾವಿ ಸಭೆ ತೀರ್ಮಾನಿಸಿತು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೆಂಕಟಾಚಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿತು.
ವಾಲ್ಮೀಕಿ ಭಾವಚಿತ್ರವನ್ನೊಳಗೊಂಡು ವಿವಿಧ ಜಾನಪದ ಕಲಾಪ್ರಕಾರಗಳ ತಂಡಗಳೊಂದಿಗೆ ಭವ್ಯ ಮೆರವಣಿಗೆಯು ಪಟ್ಟಣದ ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ ಪ್ರಾರಂಭಗೊಳ್ಳಲಿದೆ. ಮೆರವಣಿಗೆಯಲ್ಲಿ ನಂದಿಕಂಬ, ಕೊಂಬು ಕಹಳೆ, ತಮಟೆ, ಗಾವಡಗೆರೆಯ ಡೊಳ್ಳುಕುಣಿತ, ವೀರಗಾಸೆ ಕುಣಿತ, ಬೆಂಕಿಪುರದ ಸುಗ್ಗಿ ಕುಣಿತ, ಸ್ತಬ್ದಚಿತ್ರ ಭಾಗವಹಿಸಲಿವೆ. ಕಾರ್ಯಕ್ರಮದ ಅಂಗವಾಗಿ ಸಮಾಜದ ಹಿರಿಯರಿಗೆ ಸನ್ಮಾನ, ಸಾಧನೆಗೈದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.
ಇಒ ಡಾ. ಪ್ರೇಮ್ಕುಮಾರ್, ಜಿಪಂ ಸದಸ್ಯ ದೇವರಾಜ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್. ರಾಚಪ್ಪ, ಜಯರಾಂ, ಸುಬ್ಬರಾವ್, ತಾ. ನಾಯಕ ಜನಾಂಗದ ಅಧ್ಯಕ್ಷ ತಿಮ್ಮನಾಯ್ಕ ಇದ್ದರು.