ಕಕ್ಕೇರಾ; 12 ಕ್ವಿಂಟಲ್ ಪಡಿತರ ಅಕ್ಕಿ ವಶ
ಕನ್ನಡಪ್ರಭ ವಾರ್ತೆ, ಹುಣಸಗಿ, ಅ.8
ಇಲ್ಲಿಗೆ ಸಮೀಪದ ಕಕ್ಕೇರಾ ನ್ಯಾಯಬೆಲೆ ಅಂಗಡಿಯೊಂದರಿಂದ ಮಿನಿ ಟಾಟಾ ವಾಹನದಲ್ಲಿ ಪಡಿತರ ವಿತರಣೆಗೆಂದು ಬಂದಿದ್ದ ಸುಮಾರು 30 ಚೀಲ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಬೇರೆಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸುರಪುರ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ, ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಬುಧವಾರ ಜರುಗಿದೆ.
ಸುರಪುರ ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಹಾಗೂ ಆಹಾರ ನಿರೀಕ್ಷಕ ವಿಶ್ವರಾಧ್ಯ ಸತ್ಯಂಪೇಟ ಅವರು ಬುಧವಾರ ಸಾರ್ವಜನಿಕರ ದೂರಿನ ಮೇಲೆ ಕಕ್ಕೇರಾಕ್ಕೆ ಆಗಮಿಸಿ, ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಮೂಟೆಗಳನ್ನು ವಶಕ್ಕೆ ತೆಗೆದುಕೊಂಡು ಸುರಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಪರಿಶೀಲನೆ: ಪ್ರತಿ ಬುಧವಾರದ ಕಕ್ಕೇರಾದ ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಕುರಿತು ತಹಸೀಲ್ದಾರರಿಗೆ ಮಾಹಿತಿ ನೀಡಲಾಗಿತ್ತು. ವಾಹನದಲ್ಲಿ ಸಿಕ್ಕ ಅಕ್ಕಿ ಯಾವ ನ್ಯಾಯಬೆಲೆ ಅಂಗಡಿಯದ್ದು ಎಂಬುದನ್ನು ಪರಿಶೀಲಿಸಲಾಯಿತು. ಕಕ್ಕೇರಾದ ನ್ಯಾಯಬೆಲೆ ಅಂಗಡಿಯೊಂದನ್ನು ಸುಮಾರು ಮೂರೂವರೆ ಗಂಟೆಗಳ ಕಾಲ ಪರಿಶೀಲಿಸಲಾಯಿತು. ಆದರೆ ಅಲ್ಲಿ ದಾಖಲೆ ಪ್ರಕಾರ ಸರಿಯಾಗಿ ಅಕ್ಕಿ ಚೀಲಗಳು ಇರುವುದು ಗೊತ್ತಾಯಿತು.
ಕೂಲಂಕಷ ವಿಚಾರಣೆ: ನಂತರ ಸುದ್ದಿಗಾರರ ಜತೆ ಮಾತನಾಡಿದ ತಹಸೀಲ್ದಾರ್ ಬಸವರಾಜ್, ಸಾರ್ವಜನಿಕರು ನೀಡಿದ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನ್ಯಾಯಬೆಲೆ ಅಂಗಡಿ 40ರಲ್ಲಿ ಯಾವುದೇ ಲೋಪ ಮತ್ತು ಹಿಂದಿನ ಸ್ಟಾಕ್ ಕಂಡುಬಂದಿಲ್ಲ. ವಾಹನದಲ್ಲಿಯ ಅಕ್ಕಿ ಮೂಟೆಗಳನ್ನು ನಮ್ಮ ವಶಕ್ಕೆ ಪಡೆದು ಕೂಲಂಕಷವಾಗಿ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು. ಆಹಾರ ಶಿರಸ್ತೇದಾರ ರವಿ, ಕಂದಾಯ ನಿರೀಕ್ಷಕ ಸಂಗಮೇಶ ಕೆ, ಕೊಡೇಕಲ್ ಪಿಎಸ್‌ಐ ಸುನೀಲಕುಮಾರ ನಾಯಕ್ ಇತರರು ಇದ್ದರು.