ಕೊನೆಗೂ ಸರಿದಾರಿಗೆ ಬಂದ ಎಲ್ಲೈಸಿ
ಅಂಶಿ ಪ್ರಸನ್ನಕುಮಾರ್
ಕ.ಪ್ರ. ವಾರ್ತೆ, ಮೈಸೂರು, ಅ.9
ಜೀವನ್ ಸುರಕ್ಷಾ ಪಾಲಿಸಿ ನೀಡುವಾಗ ಭಾರತೀಯ ಜೀವ ವಿಮಾ ನಿಗಮ ಮಾಡಿದ್ದ ತಪ್ಪನ್ನು ಇದೀಗ ಸರಿಪಡಿಸಿಕೊಳ್ಳಲು ಮುಂದಾಗಿದೆ.
ಇದು 'ಕನ್ನಡಪ್ರಭ' ವರದಿಯ ಪರಿಣಾಮ. ಜು.15ರಂದು 'ಎಲ್ಲೈಸಿ ಹೇಳಿದ್ದೊಂದು ಮಾಡಿದ್ದೊಂದು' ಶೀರ್ಷಿಕೆಯಡಿ ಜೀವನ್ ಸುರಕ್ಷಾ ಪಾಲಿಸಿಯಲ್ಲಿ ನಿವೃತ್ತ ಡಿಎಫ್ಒ ಆರ್. ರಾಘವೇಂದ್ರ ರಾವ್ ಅವರಿಗೆ ಮಾಡಿರುವ ಅನ್ಯಾಯದ ಬಗ್ಗೆ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಈವರೆಗೆ ಸ್ಪಷ್ಟನೆ ನೀಡದ ನಿಗಮ ಸೆ.14ರಂದು ಪ್ರಕಟವಾಗಿದ್ದ 'ಪಾಲಿಸಿ ಸರಂಡರ್ ಮಾಡಿದರೂ ಹಣ ನೀಡದ ಎಲ್ಲೈಸಿ' ಎಂಬ ಮತ್ತೊಂದು ವಿಶೇಷ ವರದಿಗೆ ಕಳೆದ ವಾರ ಸ್ಪಷ್ಟನೆ ನೀಡಿ, ತನ್ನದೇನೂ ತಪ್ಪಿಲ್ಲ. ವಿನಾಕಾರಣ ತಪ್ಪೆಲ್ಲವೂ ನಮ್ಮದೆಂಬಂತೆ ಬಿಂಬಿಸಲಾಗಿದೆ. ಪಾಲಿಸಿದಾರರಿಗೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ನೆಲೆಗಟ್ಟಿನಲ್ಲಿ ಸದಾಕಾಲ ಅತ್ಯುತ್ಕೃಷ್ಟ ಸೇವೆ ಸಲ್ಲಿಸುವ ಸಂಸ್ಥೆ ಎಂದು ಎಲ್ಐಸಿ ಹೆಸರು ಗಳಿಸಿದೆ ಎಂದು ಹೇಳಿಕೊಂಡಿತ್ತು.
ಆದರೆ ಇದೀಗ ರಾಘವೇಂದ್ರ ರಾವ್ ಅವರಿಗೆ 2001ರ ಜೂ.22ರಂದು ಮಾಡಿಕೊಂಡಿರುವ ಒಪ್ಪಂದದಂತೆ ಹಣ ಪಾವತಿಸಲು ಉನ್ನತ ಅಧಿಕಾರಿಗಳು ಒಪ್ಪಿದ್ದಾರೆ. ಆದ್ದರಿಂದ ನಿಮ್ಮ ಆಯ್ಕೆಯನ್ನು ಕೆಆರ್ಎಸ್ ರಸ್ತೆಯಲ್ಲಿರುವ 1ನೇ ಶಾಖೆಗೆ ತಿಳಿಸುವಂತೆ ಹಿರಿಯ ವಿಭಾಗೀಯ ವ್ಯವಸ್ಥಾಪಕರು ನೇರವಾಗಿ ಪತ್ರ ಬರೆದು ಕೋರಿದ್ದಾರೆ.
ಏನಾಗಿತ್ತು?: ರಾಘವೇಂದ್ರ ರಾವ್ ಅವರು 2001ರ ಮಾ.28ರಂದು 1 ಲಕ್ಷ ರು.ಗಳ ಎಲ್ಐಸಿ ಜೀವನ್ ಸುರಕ್ಷಾ ಪಾಲಿಸಿಯನ್ನು ಪಡೆದರು. ಪ್ರತಿ ಸಾವಿರ ರು.ಗಳಿಗೆ 75 ರು.ನಂತೆ 1.90 ಲಕ್ಷ ರು. ನೀಡುವುದಾಗಿ ಹೇಳಲಾಗಿತ್ತು. ವಾರ್ಷಿಕ ಪ್ರೀಮಿಯಂ ಮೊತ್ತವನ್ನು 9,241 ರು. ಎಂದು ನಿಗದಿಪಡಿಸಲಾಯಿತು.
ಅದೇ ವರ್ಷದ ಜೂ.22ರಂದು ಎಲ್ಲೈಸಿ ಹಿರಿಯ ಶಾಖಾ ವ್ಯವಸ್ಥಾಪಕರು, ಕೆಆರ್ಎಸ್ ರಸ್ತೆ ಶಾಖೆ ಅವರಿಂದ ಬಂದ ಪಾಲಿಸಿ ಬಾಂಡ್ ಪಡೆದರು. ಬಾಂಡ್ ಜೊತೆಗಿದ್ದ ಪತ್ರದಲ್ಲಿ ಪಾಲಿಸಿಯಿಂದ ಆಗುವ ಅನುಕೂಲಗಳು ಹಾಗೂ ಪಾಲಿಸಿ ಅವಧಿ ಮುಕ್ತಾಯದ ನಂತರ ಸಿಗುವ ಪಿಂಚಣಿಯ ವಿವರ ನೀಡಲಾಗಿತ್ತು. ಪಿಂಚಣಿ ಪಾಲಿಸಿ ತೆಗೆದುಕೊಂಡಿರುವುದರಿಂದ ಪಾಲಿಸಿಯ ಅವಧಿ ಪೂರ್ಣಗೊಂಡ ನಂತರ ಪಿಂಚಣಿ ಆರಂಭವಾಗುತ್ತದೆ ಎಂದು ತಿಳಿಸಲಾಗಿತ್ತು. ಅದರಲ್ಲಿ ವಾರ್ಷಿಕ, 5, 10, 15 ಮತ್ತು ಅದರ ಮೇಲ್ಪಟ್ಟು ವರ್ಷಗಳಿಗೆ ಸಿಗುವ ವಾರ್ಷಿಕ ಪಿಂಚಣಿ, ಶೇ.25ರಷ್ಟು ಕಮ್ಯೂಟೇಷನ್ ಆದ ನಂತರ ಸಿಗುವ ವಾರ್ಷಿಕ ಪಿಂಚಣಿಯ ವಿವರ ನೀಡಲಾಗಿತ್ತು.
ಇದನ್ನು ಸ್ವೀಕರಿಸಿದ ರಾಘವೇಂದ್ರ ರಾವ್ ಅವರು ಪ್ರೀಮಿಯಂ ಹಣವನ್ನು ಕಳೆದ 12 ವರ್ಷಗಳಿಂದ ಪಾವತಿಸುತ್ತಾ ಬಂದರು. 1 ಲಕ್ಷ ರು.ಗಳ ಪಾಲಿಸಿಗೆ ಅವರು ಪಾವತಿಸಿದ ಪ್ರೀಮಿಯಂ 1.10 ಲಕ್ಷ ರು. ಪಿಂಚಣಿ 2013ರ ಮಾ.28ರಿಂದ ಆರಂಭವಾಗಬೇಕಿತ್ತು. ಹೀಗಾಗಿ ಪಾಲಿಸಿಯ ನಿಬಂಧನೆಗಳ ಪ್ರಕಾರ ಆರು ತಿಂಗಳ ಮುಂಚಿತವಾಗಿ ತಮ್ಮ ಆಯ್ಕೆಯನ್ನು ತಿಳಿಸಲು ರಾಘವೇಂದ್ರ ರಾವ್ ಅವರಿಗೆ ಮುಕ್ತ ಅವಕಾಶವಿತ್ತು.
ಏತನ್ಮಧ್ಯೆ ರಾಘವೇಂದ್ರ ರಾವ್ ಅವರಿಗೆ 2012ರ ಆ.7ರಂದು ಎಲ್ಲೈಸಿಯಿಂದ ಯಾವುದೇ ಸಹಿ ಇಲ್ಲದ ಪತ್ರವೊಂದು ಬಂದಿತು. ಅದರಲ್ಲಿ ಪಾಲಿಸಿಯ ಬಾಂಡ್ನಲ್ಲಿ ನಮೂದಿಸಿದ್ದಕಿಂತ ಕಡಿಮೆ ಪಿಂಚಣಿಯ ಮೊಬಲಗನ್ನು ನಮೂದಿಸಲಾಗಿತ್ತು. ನಿಮ್ಮ ಆಯ್ಕೆಯನ್ನು ತಿಳಿಸುವಂತೆ ಸೂಚಿಸಲಾಗಿತ್ತು. ಆದರೆ ಪಾಲಿಸಿ ಬಾಂಡ್ನಲ್ಲಿದ್ದಕ್ಕಿಂತ ಕಡಿಮೆ ಪಿಂಚಣಿ ಮೊಬಲಗು ನಮೂದಿಸಿದ್ದರಿಂದ ಹಾಗೂ ಕಳುಹಿಸಿದವರ ಸಹಿ ಇಲ್ಲದಿದ್ದರಿಂದ ರಾಘವೇಂದ್ರ ರಾವ್ ಅವರಿಗೆ ಆಘಾತವಾಯಿತು. ತಕ್ಷಣ ಅವರು ಕೆಆರ್ಎಸ್ ರಸ್ತೆಯ ಎಲ್ಲೈಸಿ ಶಾಖೆಗೆ ಹೋಗಿ ವಿಚಾರಿಸಿದರು. ಆಗ ಅವರು ಪತ್ರ ನೀಡಿದರೆ ತಪ್ಪನ್ನು ಸರಿಪಡಿಸುವ ಭರವಸೆ ನೀಡಿದರು. ಅದರಂತೆ ಪತ್ರ ನೀಡಿ, ಸ್ವೀಕೃತಿ ಪಡೆದರು. ಆದರೆ 2013ರ ಫೆ.12ರವರೆಗೆ ಯಾವುದೇ ಮಾಹಿತಿ ಬರಲಿಲ್ಲ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಸಲಹೆ ಮತ್ತು ಪರಿಹಾರ ಕೋರಲಾಗಿದೆ ಎಂದು ಅಂದು ಪತ್ರ ಬಂದಿತು. ಇದರಿಂದ ಅಸಮಾಧಾನಗೊಂಡ ರಾಘವೇಂದ್ರ ರಾವ್ ಅವರು ಪಾಲಿಸಿ ಬಾಂಡ್ನಲ್ಲಿರುವ ಪ್ರಕಾರ, ಇತ್ಯರ್ಥಪಡಿಸದೇ ನನಗೆ ಮೋಸ ಮಾಡಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಪತ್ರ ಬರೆದರು. ನಂತರ ಹಲವಾರು ಬಾರಿ ದೂರವಾಣಿ ಮೂಲಕ ಸಂಪರ್ಕಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. 2013ರ ಮೇ 27ರಂದು ಎಲ್ಲೈಸಿಯಿಂದ ಮತ್ತೊಂದು ಪತ್ರ ಬಂದಿತು. ಅದರಲ್ಲಿ ನಿಮ್ಮ ಆಯ್ಕೆ ತಿಳಿಸಿ ಎಂದು ಸೂಚಿಸಲಾಗಿತ್ತು. ರಾಘವೇಂದ್ರ ರಾವ್ ಅವರು ಮತ್ತೊಮ್ಮೆ ಎಲ್ಲೈಸಿ ಕಚೇರಿಗೆ ಹೋಗಿ ವಿಚಾರಿಸಿದರು. ಆದರೆ ಸರಿಯಾದ ಉತ್ತರ ಸಿಗಲಿಲ್ಲ. ನಂತರ ರಾಘವೇಂದ್ರ ರಾವ್ ಅವರು ಎಲ್ಲೈಸಿ ಕುಂದುಕೊರತೆಗಳ ವಿಭಾಗಕ್ಕೆ ದೂರವಾಣಿ ಕರೆ ಮಾಡಿ, ತಮ್ಮ ಸಮಸ್ಯೆ ವಿವರಿಸಿದರು. 10 ತಿಂಗಳಾದರೂ ತಮ್ಮ ಸಮಸ್ಯೆ ಏಕೆ ಬಗೆಹರಿದಿಲ್ಲ ಎಂದು ಪ್ರಶ್ನಿಸಿದರು. ಆಗ ಆ ಕಡೆಯಿಂದ ಬಂದ ಉತ್ತರ, ನಿಮ್ಮ ಆಯ್ಕೆಯನ್ನು ಮೊದಲು ತಿಳಿಸಿ, ನಂತರ ನಿಮ್ಮ ಸಮಸ್ಯೆ ಕಡೆ ಗಮಹರಿಸುತ್ತೇವೆ ಎಂಬುದು.
ಈ ವರ್ಷದ ಜು.1ರಂದು ಎಲ್ಲೈಸಿಯಿಂದ ಬಂದ ಪತ್ರದಲ್ಲಿ ಕ್ಲರಿಕಲ್ ಎರರ್ನಿಂದ(ಬರೆಯುವಾಗ/ ಬೆರಳಚ್ಚು ಮಾಡುವಾಗ ಆದ ತಪ್ಪು) ಈ ರೀತಿಯಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ. ಆದ್ದರಿಂದ ಯಾವುದೇ ಪೂರ್ವಾಗ್ರಹವಿಲ್ಲದೇ ನಿಮ್ಮ ಆಯ್ಕೆಯನ್ನು ತಿಳಿಸಿ, ಈ ಪತ್ರ ದೊರೆತ ಕೂಡಲೇ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೆ ರಾಘವೇಂದ್ರ ರಾವ್ ಅವರು ಇದಕ್ಕೆ ಸಿದ್ಧರಿರಲಿಲ್ಲ. ಎಲ್ಲೈಸಿಯಂಥ ಸಂಸ್ಥೆಯ ಮೇಲೆ ದೇಶದ ಕೋಟ್ಯಂತರ ಜನ ವಿಶ್ವಾಸವಿರಿಸಿ, ವಿಮೆ ಮಾಡಿಸುತ್ತಾರೆ. ಹೀಗಿರುವಾಗ ವಿಮೆ ಬಾಂಡ್ನಲ್ಲಿರುವಂತೆ ನಡೆದುಕೊಳ್ಳುವುದನ್ನು ಬಿಟ್ಟು, ಈ ರೀತಿ ಮೋಸ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದರು. ಕ್ಲರಿಕಲ್ ಎರರ್ ಕಂಡು ಹಿಡಿಯಲು 12 ವರ್ಷ ಬೇಕಾಗಿತ್ತೆ. ಈ ರೀತಿ ಎಷ್ಟೊಂದು ಮಂದಿಗೆ ಮೋಸವಾಗಿರಬಹುದು. ನಾನಂತೂ ನ್ಯಾಯ ದೊರಕುವ ತನಕ ಬಿಡುವುದಿಲ್ಲ ಎಂದು ತಿಳಿಸಿದ್ದರು.
ಗ್ರಾಹಕ ವ್ಯಾಜ್ಯಗಳ ವೇದಿಕೆಗೆ ಮೊರೆ: ಈಗಲೂ ರಾಘವೇಂದ್ರ ರಾವ್ ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಎಲ್ಲೈಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರೂ ಸಹ ತನ್ನಂತೆ ಯಾರಿಗೂ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಿದ್ದಾರೆ. ಎಲ್ಲೈಸಿಯ ಶಾಖಾ ವ್ಯವಸ್ಥಾಪಕರು, ವಿಭಾಗೀಯ ವ್ಯವಸ್ಥಾಪಕರು ಹಾಗೂ ಸೌತ್ ಸೆಂಟ್ರಲ್ ವಲಯದ ವ್ಯವಸ್ಥಾಪಕರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಅ.24ಕ್ಕೆ ಮುಂದೂಡಲ್ಪಟ್ಟಿದೆ.