ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣಾ ಜಾಗೃತಿ ಜಾಥಾ
ಮೈಸೂರು: ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಬುಧವಾರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕರಿಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.
ದಕ್ಷಿಣ ವಲಯ ಐಜಿಪಿ ಡಾ. ಕೆ. ರಾಮಚಂದ್ರ ರಾವ್ ಈ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಕುರಿತ ಹಲವು ಸಲಹೆಗಳ ಕರಪತ್ರವನ್ನು ವಿತರಿಸಿದರು. 30 ದಿನ ಬಳಕೆಯಾಗುವ ಸಿಲಿಂಡರ್ನ್ನು ಹೇಗೆ 40 ದಿನದವರೆಗೆ ಬಳಸಬಹುದು ಎಂಬ ಕುರಿತು ಮಹಿಳೆಯರಿಗೆ ಹಲವು ಸೂಚನೆ ನೀಡಿದರು. ಅಡುಗೆ ಆರಂಭಿಸುವ ಮುನ್ನ ಯೋಜನೆ ಇರಬೇಕು. ಪ್ರೆಷರ್ ಕುಕ್ಕರ್ ಬಳಸಬೇಕು, ಬೇಯಲು ಅಗತ್ಯವಿರುವಷ್ಟು ನೀರು ಬಳಸಬೇಕು, ಕುದಿಯುವಿಗೆ ಆರಂಭವಾದಾಗ ಬೆಂಕಿ ಜ್ವಾಲೆ ಕಡಿಮೆ ಮಾಡಬೇಕು, ಬೇಯಿಸುವುದಕ್ಕೆ ಮುನ್ನ ದವಸ- ಧಾನ್ಯ ಚೆನ್ನಾಗಿ ನೆನೆಸಬೇಕು, ಅಗಲವಾದ ಚಪ್ಪಟೆಯಾದ ಪಾತ್ರೆ ಬಳಸಬೇಕು, ಪಾತ್ರೆ ಮುಚ್ಚಿಡಬೇಕು, ಸಣ್ಣದಾದ ಬರ್ನಲ್ ಉಪಯೋಗಿಸಬೇಕು, ಬರ್ನಲ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಭೋಜನದ ಸಮಯ ನಿಗದಿಪಡಿಸಿಕೊಳ್ಳಬೇಕು, ಶೀತಲಗೊಳಿಸಿದ ಆಹಾರ ಬೇಯಿಸಬಾರದು ಮತ್ತು ನೂತನ್ ದೀಪ್ ಸೀಮೆಎಣ್ಣೆ ಲ್ಯಾಂಪ್ ಬಳಸಬೇಕು ಎಂಬ ಸಲಹೆ ನೀಡಿದ್ದಾರೆ. ಈ ಜಾಗೃತಿ ಜಾಥಾವು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ ಜೆ.ಕೆ. ಮೈದಾನ, ಪಡುವಾರಹಳ್ಳಿ ಮುಂತಾದ ಕಡೆಗಳಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ಅಲ್ಲದೆ ಜಿಲ್ಲೆಯ ವಿವಿಧೆಡೆ ಸುರಕ್ಷಾ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ. ಎಸ್ಪಿ ಅಭಿನವ್ ಖರೆ, ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಜಿ. ಮಂಜುನಾಥ್ ಇದ್ದರು.