ಪೈಲಟ್ ಯೋಜನೆಗೆ 10 ಗ್ರಾಪಂಗಳ ಆಯ್ಕೆ
ಹುಣಸೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೊಸ ವಿಧಾನವನ್ನು ಅಳವಡಿಸಿದ್ದು, ನೂತನ ವಿಧಾನ ಜಾರಿಗೆ ತಾಲೂಕಿನ 10 ಗ್ರಾಪಂಗಳನ್ನು ಪ್ರಾಯೋಗಿಕವಾಗಿ(ಪೈಲಟ್ ಯೋಜನೆ) ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಫೂರ್ತಿ ಸಂಸ್ಥೆಯ ಮುಖ್ಯಸ್ಥೆ ಎ.ಆರ್. ಸುಧಾಮಣಿ ಹೇಳಿದರು.
ಸ್ಫೂರ್ತಿ ಸಂಸ್ಥೆಯ ಕಚೇರಿಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆ ಇಂದು ಹಳ್ಳಹಿಡಿದಿದೆ. ಜಾಬ್ ಕಾರ್ಡ್ ನೀಡುವುದರಿಂದ ಹಿಡಿದು ಫಲಾನುಭವಿಗೆ ಕೂಲಿ ನೀಡುವವರೆವಿಗೂ ಅಕ್ರಮ ನಡೆಯುತ್ತಿರುವುದನ್ನು ಮನಗಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರೇತರ ಸಂಘ- ಸಂಸ್ಥೆಗಳ ಸಹಯೋಗ ಪಡೆದು ಯೋಜನೆಗೆ ಹೊಸ ರೂಪ ನೀಡಲು ನಿರ್ಧರಿಸಿದೆ. ಹುಣಸೂರಿನಲ್ಲಿ ತಮ್ಮ ಸ್ಫೂರ್ತಿ ಸಂಸ್ಥೆ ಈ ಜವಾಬ್ದಾರಿ ಹೊತ್ತಿದೆ ಎಂದು ತಿಳಿಸಿದರು.
ಸಂಘ-ಸಂಸ್ಥೆಗಳ ಪಾತ್ರವೇನು?: ರಾಜ್ಯದಲ್ಲಿ ಪ್ರಾಯೋಗಿಕವಾಗಿ 9 ಜಿಲ್ಲೆಗಳನ್ನು ಆಯ್ದುಕೊಂಡಿದ್ದು, ಜಿಲ್ಲೆಯಲ್ಲಿ ಹುಣಸೂರು ತಾಲೂಕಿನ ಎರಡು ಹೋಬಳಿಗಳು ಅಂದರೆ ಕಸಬಾ ಹಾಗೂ ಹನಗೋಡು ಹೋಬಳಿಗಳ 10 ಗ್ರಾಪಂಗಳನ್ನು ಆರಿಸಲಾಗಿದೆ. ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ತಮ್ಮ ಸಂಸ್ಥೆ ಜಾಬ್ ಕಾರ್ಡ್ದಾರರನ್ನು ಗುರುತಿಸಲಿದೆ. ಅಲ್ಲದೇ ತಲಾ 20 ಮಂದಿಗೆ ಒಬ್ಬ ಮುಖಂಡನನ್ನು ರೂಪಿಸುತ್ತದೆ. ಜಾಬ್ ಕಾರ್ಡ್ ಹೊಂದಿರುವ ಸಮ್ಮುಖದಲ್ಲೆ ಕೈಗೊಳ್ಳಬೇಕಾದ ಕಾಮಗಾರಿಗನ್ನು ನಿರ್ಧರಿಸಲಾಗುವುದು.
ನಂತರ ಜಾಬ್ ಕಾರ್ಡ್ ಪಡೆದವರಿಗೆ 100 ದಿನಗಳ ಕೂಲಿ ಸಿಗುವಂತೆ ನೋಡಿಕೊಳ್ಳಲಾಗುವುದು. ದಿನವೊಂದಕ್ಕೆ ಈ ಸಾಲಿನಿಂದ 174 ನೀಡಲಾಗುವುದು. ಅವಧಿ ಮುಗಿದ ನಂತರ ಈ ಎಲ್ಲ ಕೂಲಿಕಾರ್ಮಿಕರ ಸಮ್ಮುಖದಲ್ಲಿ ಈ ಸಾಲಿನಲ್ಲಿ ಎಷ್ಟು ಖರ್ಚಿನಲ್ಲಿ ಯಾವ ಯಾವ ಕಾರ್ಯಗಳಾಗಿವೆ ಎಂಬ ಮಾಹಿತಿ ನೀಡುವ ಗುರುತರ ಹೊಣೆಯನ್ನು ಎನ್ಜಿಒಗಳು ಕೈಗೊಳ್ಳಲಿವೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಈಗಾಗಲೇ ಪ್ರತಿ ಪಂಚಾಯಿತಿಗೆ 100 ಸಂಘದಂತೆ 10 ಗ್ರಾಪಂ ವ್ಯಾಪ್ತಿಯಲ್ಲಿ 10 ಸಾವಿರ ಸಂಘಗಳನ್ನು ಗುರುತಿಸಿದೆ. ಅ.20ರಂದು ಜಿಪಂ ಸಿಇಒ ಗೋಪಾಲ್ ನೇತೃತ್ವದಲ್ಲಿ ಸಭೆ ಸೇರಲಿದ್ದು, ಯೋಜನೆಯ ಸಮರ್ಪಕ ಜಾರಿಯ ಕುರಿತಂತೆ ಇನ್ನಷ್ಟು ಮಾಹಿತಿಗಳು ಸಿಗಲಿವೆ ಎಂದು ಅವರು ವಿವರಿಸಿದರು.
ಖಾತ್ರಿ ಯೋಜನೆಯಲ್ಲಿ ನೀರು ಬಳಕೆದಾರರ ಸಂಘದ ಸದಸ್ಯರನ್ನು ಸೇರಿಸಿಕೊಳ್ಳುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಪ್ರಾರಂಭವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕಿನಲ್ಲಿ ನೀರು ಬಳಕೆದಾರ ಸಂಘದ ಸಭೆ ಕರೆದು ಚರ್ಚಿಸಿ ಅಭಿಪ್ರಾಯಗಳನ್ನು ತಿಳಿಸಲು ಸೂಚಿಸಿದ್ದು, ಈ ನಿಟ್ಟಿನಲ್ಲಿ ನೀರು ಬಳಕೆದಾರರ ಸಂಘದ ಸದಸ್ಯರನ್ನು ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯರನ್ನಾಗಿಸಲಾಗುವುದು ಎಂದು ಅವರು ತಿಳಿಸಿದರು.
'ಖಾತ್ರಿ'ಯಲ್ಲಿ ಮಧ್ಯವರ್ತಿಗಳ ಹಾವಳಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾದ ಪರಿಣಾಮ ಯೋಜನೆಯೇ ತಲೆಕೆಳಗಾಗಿದ್ದು, ಈ ಎಲ್ಲ ತೊಂದರೆಗಳನ್ನು ತಪ್ಪಿಸಲು ಯೋಜನೆಗೆ ಹೊಸ ರೂಪ ನೀಡಲಾಗುತ್ತಿದೆ. ಅಲ್ಲದೇ ಸಚಿವರ ಸಭೆಯಲ್ಲಿ ಕೇರಳದಲ್ಲಿ ಯೋಜನೆಯನ್ನು ಕೃಷಿಭೂಮಿ ವ್ಯಾಪ್ತಿಗೆ ಸೇರಿಸಿದ್ದರಿಂದ ದೇಶದಲ್ಲೇ ಅತಿ ಹೆಚ್ಚಿನ ಅನುದಾನ ಅಲ್ಲಿ ಖರ್ಚಾಗಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.
ಹಾರಂಗಿ ಮಹಾಮಂಡಳದ ಅಧ್ಯಕ್ಷ ಚೌಡೇಗೌಡ ಮಾತನಾಡಿ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ನೀರು ಬಳಕೆದಾರರ ಸಂಘ ಸಿದ್ದವಿದ್ದು, ನರೇಗಾ ಯೋಜನೆಯನ್ನು ಕೃಷಿ ಭೂಮಿಗೂ ಅಳವಡಿಸಲಿ ಹಾಗೂ ಸಣ್ಣ ಹಾಗೂ ದೊಡ್ಡ ಹಿಡುವಳಿದಾರರೆಂಬ ಬೇಧ-ಭಾವವನ್ನು ತೋರದೆ ಎಲ್ಲರಿಗೂ ಸಮಾನ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು. ಸಭೆಯಲ್ಲಿ ಹಾರಂಗಿ ಮಹಾಮಂಡಳದ ನಿರ್ದೇಶಕರಾದ ಚಂದ್ರೇಗೌಡ, ಮಹದೇವ್ ಭಾಗವಹಿಸಿದ್ದರು.