'ಮನಸ್ವಿನಿ' ಜಾರಿಗೆ ಮೈಸೂರು ವಿವಿ ಶ್ಲಾಘನೆ
ಮೈಸೂರು: ಸರ್ಕಾರದ ಮಹತ್ವಾಕಾಂಕ್ಷೆಯ ಮನಸ್ವಿನಿ ಯೋಜನೆಯನ್ನು ಆಗಸ್ಟ್ನಲ್ಲಿ ಘೋಷಿಸಿ, ಅ.7ರಂದು ವಿಧ್ಯುಕ್ತವಾಗಿ ಚಾಮರಾಜನಗರದಲ್ಲಿ ಚಾಲನೆ ನೀಡಿರುವುದಕ್ಕೆ ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರೊ. ಡಿ. ಜಯದೇವರಾಜ ಅರಸು ಶ್ಲಾಘಿಸಿದ್ದಾರೆ.
ಸರ್ಕಾರ ತನ್ನ ಮುಂದಿರಿಸಿದ ಶಿಫಾರಸುಗಳನ್ನು ಎಷ್ಟರ ಮಟ್ಟಿಗೆ ಮನನ ಮಾಡಿ ಸ್ಪಂದಿಸುತ್ತಿದೆ ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನವಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯದಂತೆ ಈ ಯೋಜನೆಯ ಮಹತ್ವ ಪಡೆದಿದೆ. ಇದು 40 ವರ್ಷ ಮೀರಿದ ಬಡತನ ರೇಖೆಯಿಂದ ಕೆಳಗಿರುವ ಅವಿವಾಹಿತ ಮಹಿಳೆಯರಿಗೆ ಮತ್ತು 18 ವರ್ಷ ಮೀರಿದ ಪರಿತ್ಯಕ್ತ ಮಹಿಳೆ, ವಿಚ್ಛೇದಿತ ಮಹಿಳೆಯರಿಗೆ ಮಾಹೆಯಾನ 500 ಸಾಮಾಜಿಕ ನೆರವು ನೀಡುವ ಯೋಜನೆ ಇದಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಬಿ.ಎಸ್. ಕೃಷ್ಣಪ್ರಸಾದ್ ಮೂರು ವರ್ಷ ನಿರಂತರವಾಗಿ ಚಾಮರಾಜನಗರ ತಾಲೂಕಿನ 171 ಹಳ್ಳಿಗಾಡಿನಲ್ಲಿರುವ 1,765 ಅವಿವಾಹಿತ ಬಡವರಿಗೆ ಸಾಮಾಜಿಕ ಭದ್ರತೆಯ ಬಗ್ಗೆ ನಡೆಸಿದ ಸಂಶೋಧನೆ ಇಂದು ಸಾರ್ಥಕವೆನಿಸುತ್ತದೆ. ಆ ದಿಕ್ಕಿನಲ್ಲಿ ನೇರವಾಗಿ ಅವರು ಕ್ರಿಯಾತ್ಮಕ ಅಧ್ಯಯನ ನಡೆಸಿದರ ಫಲಶ್ರುತಿ ಮನಸ್ವಿನಿ ಎಂದು ಹೇಳಿಕೊಳ್ಳಲು ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯು ಹೆಮ್ಮೆಪಡುತ್ತದೆ ಎಂದಿದ್ದಾರೆ.
ಅನುಕರಣೀಯ: ಮಹಿಳೆಯರ ಸಬಲೀಕರಣಕ್ಕಾಗಿ ಮೂಡಿಬಂದಿರುವ ಮನಸ್ವಿನಿ ಯೋಜನೆಯ ಪೂರಕ ಅಧ್ಯಯನ ಅನುಕರಣೀಯ. ಹಾಗೆಯೇ, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಸಂಶೋಧನೆಗಳು ಕೇವಲ ಡಾಕ್ಟರೇಟ್ ಅಥವಾ ವೈಯಕ್ತಿಕ ಸಾಧನೆಯ ಉದ್ದೇಶವಾಗಿರದೆ ಸಮಾಜಮುಖಿಯಾಗಿರಬೇಕೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಂತಹ ಸಕಾರಾತ್ಮಕ ಸಂಶೋಧನೆಯು ಜನೋಪಯೋಗಿ ಯೋಜನೆ ಆಗಿರುವುದನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ನ್ಯಾಕ್ ತಜ್ಞರ ತಂಡವು ಉತ್ಸುಕತೆಯಿಂದ ದಾಖಲಿಸಿಕೊಂಡಿತ್ತು. ಅದರಿಂದ ವಿಶ್ವವಿದ್ಯಾನಿಯಲದ ಗುಣಾತ್ಮಕ ರೇಟಿಂಗ್ ಹೆಚ್ಚಿಸಲು ಸಾಕಾರವಾಯಿತು. 2011ರಲ್ಲೇ ಈ ಸಂಬಂಧ ವರದಿ ನೀಡಿದ್ದು, ಅಂದಿನ ಮುಖ್ಯಮಂತ್ರಿಗಳು 100ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 45 ವರ್ಷ ಮೀರಿದ ಅವಿವಾಹಿತ ಮಹಿಳೆಯರಿಗಾಗಿ ಮಾಹೆಯಾನ 1000 ಗೌರವಧನ ನೀಡುವುದಾಗಿ ಘೋಷಿಸಿದ್ದರು. ಕೆಲವು ಆಡಳಿತಾತ್ಮಕ ಕಾರಣಗಳಿಂದಾಗಿ ಯೋಜನೆಯು ಪೂರ್ಣ ರೂಪ ತಳೆಯಲಿಲ್ಲ ಎಂದು ಅವರು ಹೇಳಿದ್ದಾರೆ.
ಖ್ಯಾತಿ ಹೆಚ್ಚಿಸಿದೆ: ಈ ಕಾರ್ಯಕ್ರಮವನ್ನು ಘೋಷಿಸಿ ರಾಜ್ಯ ಸರ್ಕಾರವು ಅನ್ವಯಿಕ ಸಂಶೋಧನೆ ಮತ್ತು ಸಾಮಾಜಿಕ ಸಂಬಂಧಿತ ಸಂಶೋಧನೆಗಳಿಗೆ ವಿವಿಗೆ ಒತ್ತು ಕೊಟ್ಟಿರುವುದನ್ನು ಎತ್ತಿಹಿಡಿದಿದೆ. ಮೈಸೂರು ವಿವಿ ಸಮಾಜದ ಏಳಿಗೆಗೆ ಮತ್ತು ಒಳಿತಿಗಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಮತ್ತು ಅದರ ಕೊಡುಗೆಯನ್ನು ಸರ್ಕಾರವು ಶ್ಲಾಘಿಸಿದೆ. ಹಿರಿಯ ಅಧಿಕಾರಿಗಳಾದ ಡಾ. ರವೀಂದ್ರ, ಡಾ. ಶಶಿಧರ್, ಡಾ. ಗೌರಿ ತ್ರಿವೇದಿ, ಡಾ. ಅಮಿತಾ ಪ್ರಸಾದ್ ಇತ್ಯಾದಿ ಸಂಶೋಧಕರು ತಮ್ಮ ಕೊಡುಗೆಯಿಂದ ಮೈಸೂರು ವಿವಿ ಖ್ಯಾತಿ ಹೆಚ್ಚಿಸಿದ್ದಾರೆ.
ಅಭಿವೃದ್ಧಿ ಅಧ್ಯಯನ ಸಂಸ್ಥೆಯು 1990ರಲ್ಲಿ ವಿವೇಕಾನಂದ ಗಿರಿಜನ ಕೇಂದ್ರದ ಡಾ. ಸುದರ್ಶನ್ ಅವರ ಸಹಯೋಗದಿಂದ 3,900 ಸೋಲಿಗ ಕುಟುಂಬದ ಸಮೀಕ್ಷೆ ನಡೆಸಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ, 47 ಲಕ್ಷ ನೆರವನ್ನು ಒದಗಿಸಿತ್ತು. 20 ವರ್ಷಗಳಿಂದ ಸೋಲಿಗರ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಾ ಇದೆ. ಮಾದರಿ ಅಭಿವೃದ್ಧಿ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಅದನ್ನು ರಾಷ್ಟ್ರವ್ಯಾಪ್ತಿಗೆ ವಿಸ್ತರಿಸುವ ಕಾರ್ಯಕ್ರಮ ಸದ್ಯದಲ್ಲೆ ನಡೆಯಲಿದೆ. ಕುಲಪತಿ ಪ್ರೊ. ರಂಗಪ್ಪ ಅವರು ವಿವಿಯಿಂದ ಸಮಾಜದ ಒಳಿತಿಗೆ ಹೆಚ್ಚು ಒತ್ತು ಕೊಟ್ಟು, ಸಂಶೋಧನೆಗೆ ಪ್ರೋತ್ಸಾಹ ನೀಡಿದ್ದಾರೆ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.