ಶ್ರೀಕಂಠೇಶ್ವರ ವರ್ಧಂತಿ ಮಹೋತ್ಸವ
ನಂಜನಗೂಡು: ಪುರಾಣ ಪ್ರಸಿದ್ದ ದಕ್ಷಿಣ ಕಾಶಿ ಎಂದೆ ಖ್ಯಾತಿ ಪಡೆದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ವರ್ಧಂತಿ ಮಹೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ರಾಜಗೋಪುರದ ಮುಂಭಾಗ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಲಿಂಗೇಗೌಡ ಶ್ರೀಕಂಠೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಗಣಪತಿ, ಸುಬ್ರಮಣ್ಯೇಶ್ವರ, ಚಂಡಿಕೇಶ್ವರ, ತಾಂಡವೇಶ್ವರ, ಪಾರ್ವತಿದೇವಿ, ಮಹಾರಾಜರ ಉತ್ಸವ ಮೂರ್ತಿಗಳು ಕೊನೆಯದಾಗಿ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯು ಗೌರಿ ಆನೆ ಮುಂಚನೆಯಲ್ಲಿ ದೇವಾಲಯದ ಮುಂಭಾಗದಿಂದ ಹೊರಟು ಮೆರವಣಿಗೆಯಲ್ಲಿ ಡೋಲು ಕುಣಿತ, ಪೂಜಾ ಕುಣಿತ, ಗಾಡಿಗೊಂಬೆ, ವೀರಗಾಸೆ, ಗೊರವರ ಕುಣಿತ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಲಾ ತಂಡಗಳು ಕೌಸಲ ಪ್ರದರ್ಶಿಸುತ್ತಾ ಮೆರವಣಿಗೆ ಮೆರುಗು ನೀಡಿದರು. ರಥದ ಬೀದಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನೆರವೇರಿತು. ದೀಪಾಲಂಕಾರಿಗಳಿಂದ ಅಲಂಕಾರಗೊಂಡ ದೇವರ ರಥಗಳನ್ನು ನೋಡಿ ಭಕ್ತರು ಭಾವಪರಶರಾದರು. ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್, ನೀಲಕಂಠ ದೀಕ್ಷಿತ್, ಪ್ರಸನ್ನ ದೀಕ್ಷಿತ್, ದೇವಾಲಯದ ಪ್ರಮುಖರಾದ ಎನ್.ಎ. ಸದಾಶಿವು, ನಂಜುಂಡಸ್ವಾಮಿ, ಶಿವಕುಮಾರ್, ಸ್ಥಳ ಪುರೋಹಿತ, ಸಪ್ತಋಷಿ ಜೋಯಿಸ್, ಶಂಕರ ಮಠದ ಧರ್ಮಾಧಿಕಾರಿ ಶ್ರೀಕಂಠ ಜೋಯಿಷ್ ಇದ್ದರು.