ಸಾರ್ವಜನಿಕ ಅಹವಾಲಿಗೆ ಡಿವೈಎಸ್ಪಿ ಕಚೇರಿ ಮುಕ್ತ
ಹುಣಸೂರು: ಹುಣಸೂರು ಡಿವೈಎಸ್ಪಿ ಕಚೇರಿಯಲ್ಲಿ ಅಹವಾಲು ಸಲ್ಲಿಸಲು ಮುಕ್ತವಾಗಿ ತೆರೆದಿರುತ್ತದೆ. ಅನ್ಯಾಯಕ್ಕೊಳಗಾದವರು ನಿರ್ಭೀತಿಯಿಂದ ಬಂದು ಅಹವಾಲು ಸಲ್ಲಿಸಬಹುದು ಎಂದು ನೂತನ ಡಿವೈಎಸ್ಪಿ ನಂಜುಂಡ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ದಸಂಸ ಹಾಗೂ ರಾಜ್ಯ ರೈತ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವರ್ಗಾವಣೆಗೊಂಡ ಹುಣಸೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ(ಡಿವೈಎಸ್ಪಿಪಿ) ಮುದ್ದುಮಹದೇವಯ್ಯ ಅವರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗಗಳನ್ನು ಸಾರ್ವಜನಿಕರು ಸಮಾನತೆಯಿಂದ ಕಾಣುವ ಮೂಲಕ ಮನುಷ್ಯನ ಸಾರ್ಥಕತೆ ಬದುಕನ್ನು ಸಾಧಿಸಿ ತೋರಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಮುದ್ದು ಮಹದೇವಯ್ಯ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ವೃತ್ತ ನಿರೀಕ್ಷಕ ಗಜೇಂದ್ರ ಪ್ರಸಾದ್, ತಾಪಂ ಇಒ ಡಾ. ಪ್ರೇಮ್ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಡೀಡ್ ಶ್ರೀಕಾಂತ್, ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ದಲಿತ ಮುಖಂಡರಾದ ಡಿ. ಕುಮಾರ್, ವರದರಾಜು, ಸಿಪಿಐ(ಎಂ) ತಾ. ಕಾರ್ಯದರ್ಶಿ ವಿ. ಬಸವರಾಜು ಕಲ್ಕುಣಿಕೆ, ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿದರು. ದಲಿತ ಮುಖಂಡರಾದ ಅಪ್ಪಣ್ಣ, ಕಿರಿಜಾಜಿ ಗಜೇಂದ್ರ, ದೇವೇಂದ್ರ, ವೇಣುಗೋಪಾಲ್, ಬೆಳ್ತೂರು ಮಹದೇವ್ ಇದ್ದರು.