ಕಸ ಬಿಸಾಡದಂತೆ ಕ್ರಮ
ಕ.ಪ್ರ.ವಾರ್ತೆ ಮೈಸೂರು ಅ. 10
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಜಿಲ್ಲಾಡಳಿತ ಮತ್ತು ವ್ಯವಸ್ಥೆ ಹಾಗೂ ಸ್ವಚ್ಛತಾ ಉಪ ಸಮಿತಿಯು ಮುಂದಾಗಿದೆ. ದೇಶ- ವಿದೇಶ ಮತ್ತು ರಾಷ್ಟ್ರದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಸ ನಿರ್ವಹಣೆಗಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ.
ದಸರಾ ಜಂಬೂಸವಾರಿ ನಡೆಯುವ ಮುನ್ನಾ ದಿನ ನಗರದಲ್ಲಿ ಆಯುಧ ಪೂಜೆ ನಡೆಯಲಿದೆ. ಅಂದು ಮಾರುಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಕಸ ಹರಡದಂತೆ ನೋಡಿಕೊಳ್ಳುವುದನ್ನೆ ಸ್ವಚ್ಛತಾ ಉಪ ಸಮಿತಿಯು ಪ್ರಮುಖ ಗುರಿಯನ್ನಾಗಿಸಿಕೊಂಡಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದಾದ್ಯಂತ ಸಾರ್ವಜನಿಕರು ತಮ್ಮ ತಮ್ಮ ವಾಹನಗಳಿಗೆ ಪೂಜೆ ಮಾಡುವುದು, ರಸ್ತೆಯಲ್ಲಿ ಕುಂಬಳ ಕಾಯಿ ಹೊಡೆಯುವುದು, ವಾಹನಕ್ಕೆ ಬಾಳೆಕಂದು, ಮಾವು, ಹೂವು ಕಟ್ಟುವುದು ಸಾಮಾನ್ಯ.
ಇದರಿಂದಾಗಿ ರಸ್ತೆಯಲ್ಲಿ ಕಸ ಹರಡುತ್ತದೆ. ರಸ್ತೆಯಲ್ಲೆಲ್ಲಾ ಕುಂಬಳಕಾಯಿಯ ತುಂಡುಗಳು, ಮಾವಿನ ಚಿಗುರು, ಬಾಳೆಯ ಕಂದಿನ ತುಂಡುಗಳನ್ನು ಬೀಸಾಡಲಾಗಿರುತ್ತದೆ. ಇದನ್ನೆ ಮುಖ್ಯ ಗುರಿಯಾಗಿಸಿರೊಂಡು ಸ್ವಚ್ಛತಾ ಉಪ ಸಮಿತಿಯು ಆಯುಧ ಪೂಜೆ ದಿನದ ಮಧ್ಯಾಹ್ನ 12 ಗಂಟೆಯಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ. ಅದರಂತೆ ದಸರಾ ದಿನ ಬೆಳಗ್ಗೆವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಯಾವುದೆ ಕಸ ಇಲ್ಲದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದೆ.
ಅಲ್ಲದೆ ದಸರಾ ಮಹೋತ್ಸವದ ಜಂಬೂಸವಾರಿ ಅರಮನೆಯಿಂದ ಬನ್ನಿಮಂಟಪಕ್ಕೆ ತೆರಳಿದ ಬಳಿಕ ರಸ್ತೆಯುದ್ಧಕ್ಕೂ ರಾಶಿ ರಾಶಿ ಕಸ ಬಿದ್ದಿರುತ್ತದೆ. ಸಾಮಾನ್ಯವಾಗಿ ಈ ಕಸವನ್ನು ಮರು ದಿನ ಅಥವಾ ದಸರಾ ಮುಗಿದ ರಾತ್ರಿ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಮೆರವಣಿಗೆ ತೆರಳಿದ ಕೂಡಲೆ ಹಿಂದಿನಿಂದ ಕಸ ಸಂಗ್ರಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ಪಾಲಿಕೆ ಜೊತೆಗೂಡಿ 280 ಮಂದಿ ಪೌರ ಕಾರ್ಮಿಕರನ್ನು ಹೆಚ್ಚುವರಿಯಾಗಿ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗಿದೆ.
ಮೂರು ಪಾಳಿಯಲ್ಲಿ ಇವರನ್ನು ನೇಮಕ ಮಾಡಿಕೊಳ್ಳಲಾಗಿದೆ. ರಾತ್ರಿ ಇಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸುವಂತೆ ರೇಡಿಯೊ ಮತ್ತು ಎಫ್ಎಂಗಳಲ್ಲಿ ಪ್ರಚಾರ ಕೈಗೊಳ್ಳಲು ಸಹ ತೀರ್ಮಾನಿಸಲಾಗಿದೆ.
ಕಸ ವಿಲೇವಾರಿಗಾಗಿ 3 ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಇವುಗಳ ಜೊತೆಗೆ ಪಾಲಿಕೆ ವಾಹನ ಮತ್ತು ಪೌರ ಕಾರ್ಮಿಕರೂ ದಸರಾ ಸ್ವಚ್ಛತೆಯಲ್ಲಿ ಭಾಗವಹಿಸುವರು.
ಸ್ವಚ್ಛತಾ ಉಪ ಸಮಿತಿಯು ಆಹಾರ ಮೇಳಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದೆ. ಆಹಾರ ಮೇಳದಲ್ಲಿ ಸುಚ್ಛಿತ್ವ ಕಾಪಾಡದಿದ್ದರೆ ತೊಂದರೆ ಸಂಭವಿಸಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅಷ್ಟೆ ಅಲ್ಲದೆ ಆಹಾರ ಮೇಳದ ಎಲ್ಲಿಯೂ ಕಸ ಬೀಸಾಡದಂತೆ ಎಚ್ಚರಿಕೆ ವಹಿಸಲಾಗಿದೆ.
ಮೊಬೈಲ್ ಶೌಚಾಲಯ ಬಂದಿಲ್ಲ
ದಸರಾ ಮಹೋತ್ಸವಕ್ಕೆ ರಾಜ್ಯ ಮತ್ತು ರಾಷ್ಟ್ರದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುವುದರಿಂದ ನಗರದ ಅರಮನೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚಾರಿ ಶೌಚಾಲಯ ವ್ಯವಸ್ಥೆ ಕಲ್ಪಿಸಲು ದಸರಾ ಉಪ ಸಮಿತಿ ತೀರ್ಮಾನಿಸಿತ್ತು. ಆದರೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಜಿಲ್ಲಾಡಳಿತದ ವತಿಯಿಂದ ಈ ವ್ಯವಸ್ಥೆ ಪೂರೈಸುವುದಾಗಿ ಭರವಸೆ ನೀಡಿದ್ದರಿಂದ ಸ್ವಚ್ಛತಾ ಉಪ ಸಮಿತಿಯು ಈ ಯೋಜನೆ ಕೈ ಬಿಟ್ಟಿತ್ತು. ಆದರೆ ಇದುವರೆಗೂ ಸಂಚಾರಿ ಶೌಚಾಲಯ ವ್ಯವಸ್ಥೆ ಆಗಿಲ್ಲ.
ಡಿ.ಎನ್. ಮಹೇಂದ್ರ