ಕ್ರೀಡೆಯಿಂದ ಏಕತೆ ಸಾಧ್ಯ: ವಾಳಪಿಳ್ಳೈ
ಕ.ಪ್ರ.ವಾರ್ತೆ ಮೈಸೂರು ಅ. 10
ಕ್ರೀಡೆಯು ಏಕತೆಯ ಸಂಕೇತವಾಗಿದೆ ಎಂದು ಬಿಷಪ್ ಡಾ. ಥಾಮಸ್ ಆಂತೋಣಿ ವಾಳಪಿಳ್ಳೈ ಹೇಳಿದರು.
ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು, ಸೇಂಟ್ ಜೋಸೆಫ್ ಪಿಯು ಕಾಲೇಜು ಆವರಣದಲ್ಲಿ ಇಲವಾಲದ ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆ ಜೊತೆಗೂಡಿ ಗುರುವಾರ ಆಯೋಜಿಸಿದ್ದ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರೀಡೆ ಮತ್ತು ಆಟಗಳು ಜೀವನದ ಪ್ರಮುಖ ಅಂಗ. ಅದು ಏಕತೆಯನ್ನು ತಂದುಕೊಡುತ್ತದೆ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ಕ್ರೀಡೆಯು ಆರೋಗ್ಯಕರ ಮನಸ್ಸನ್ನು ರೂಪಿಸುತ್ತದೆ ಎಂದ ಅವರು, ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕ್ರೀಡಾಕೂಟ ಉದ್ಘಾಟನೆ ಹಿನ್ನೆಲೆಯಲ್ಲಿ ಮೈಸೂರು ವಿವಿ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಮತ್ತು ವಿಜಯ ವಿಠಲ ಪಿಯು ಕಾಲೇಜು ನಡುವೆ ನಡೆದ ಪಂದ್ಯದಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಜಯಗಳಿಸಿತು. ಮಹಾಜನ ಪಿಯು ಕಾಲೇಜು ಮತ್ತು ಜ್ಞಾನೋದಯ ಪಿಯು ಕಾಲೇಜು ನಡುವೆ ನಡೆದ ಎರಡನೆ ಪಂದ್ಯದಲ್ಲಿ ಮಹಾಜನ ಪಿಯು ಕಾಲೇಜು ತಂಡ ಜಯಗಳಿಸಿತು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ಕೃಷ್ಣ, ಮೈಸೂರು ಡಿಯೊಸ್ಕಾನ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಡಾ. ಥಾಮಸ್ ಬೆಕೆಟ್ ಡಿಸೋಜಾ, ಕ್ರೀಡಾಕೂಟದ ಸಂಚಾಲಕ ಕಾಂತರಾಜು, ಪ್ರಾಂಶುಪಾಲರುಗಳಾದ ಗ್ಲಾಡೀಸ್, ಪ್ರೊ. ಸಿ.ಎಂ. ಮನಿ ಮ್ಯಾಥೀವ್, ಪ್ರೊ. ಮಲ್ಲಿಕಾರ್ಜುನ ಶೆಟ್ಟಿ, ಚಂದ್ರಶೇಖರ್ ಇದ್ದರು.