ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾರುಕಟ್ಟೆಯಲ್ಲಿ ಸೌಲಭ್ಯ ಕಲ್ಪಿಸಿ

Rashmi Kasaragodu
Updated On : 10 Oct 2013, 11:38 am

ಕ.ಪ್ರ.ವಾರ್ತೆ   ಹುಣಸೂರು   ಅ. 10
ತಾಲೂಕಿನ ಕಟ್ಟೆಮಳಲವಾಡಿ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ಮೂಲ ಸೌಕರ್ಯ ಕಲ್ಪಿಸಬೇಕು, ಇಲ್ಲದಿದ್ದರೆ ತಂಬಾಕು ಮಂಡಳಿ ಅಧ್ಯಕ್ಷರಿಗೆ ಅವರಿಗೆ ದೂರು ನೀಡುವ ಮೂಲಕ ಮಾರುಕಟ್ಟೆಯ ಅಧೀಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಂಸದ ಎಚ್. ವಿಶ್ವನಾಥ್ ಎಚ್ಚರಿಸಿದರು.
ತಾಲೂಕಿನ ಕಟ್ಟೆಮಳಲವಾಡಿ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಮಾರುಕಟ್ಟೆ ಭೇಟಿ ನೀಡಿ, ಎಲ್ಲ ಪ್ಲಾಟ್ಫಾರಂಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದ ನಂತರ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರ್ನಾಲ್ಕು ವರ್ಷದಿಂದ ತಾವು ಈ ಕುರಿತು ಮಂಡಳಿಯ ಎಲ್ಲ ಅಧಿಕಾರಿಗಳಿಗೂ ತಿಳಿಸುತ್ತಿದ್ದೇನೆ. ಆದರೂ ತಂಬಾಕನ್ನು ಮಾರಾಟ ಮಾಡಲು ತರುವ ರೈತರಿಗೆ ಮೂಲಭೂತವಾಗಿ ಬೇಕಾದ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ನಿರ್ಮಾಣ ಇನ್ನೂ ಆಗಿಲ್ಲ.
ಅಧಿಕಾರಿಗಳು ನಿಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಮಾಡಿಕೊಳ್ಳುವ ನೀವು ರೈತರಿಗೇಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆರ್ಎಂಒ ನರಸಿಂಹಯ್ಯ ಅವರನ್ನು ಪ್ರಶ್ನಿಸಿ, ಈ ಕುರಿತಂತೆ ತಾವು ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಶೌಚಾಲಯ ನಿರ್ವಹಣೆ ಕುರಿತಂತೆ ಸಮಸ್ಯೆಯಾಗುತ್ತಿದೆ ಎಂದು ಆರ್ಎಂಒ ತಿಳಿಸಿದಾಗ ಸುಲಭ್ ಶೌಚಾಲಯದಂತಹ ಇನ್ನಿತರ ವ್ಯವಸ್ಥೆಗಳ ಮೂಲಕ ಸೌಕರ್ಯ ಕಲ್ಪಿಸಿ, ಮಂಡಳಿಯಲ್ಲಿ ಬೇಕಾದಷ್ಟು ಹಣವಿದೆಯಲ್ಲ ಎಂದು ಸಂಸದರು ತಿಳಿಸಿದರು.
ಮಾರುಕಟ್ಟೆಯಲ್ಲಿ ಈ ಸಾಲಿನಿಂದ ಇ-ಹರಾಜು ಪ್ರಕ್ರಿಯೆ, ಎರಡು ಪ್ಲಾಟ್ಫಾರಂಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಂತಹ ಕ್ರಮಗಳಿಂದ ಅತ್ಯಂತ ಪಾರದರ್ಶಕವಾಗಿ ಮಾರುಕಟ್ಟೆ ನಡೆಯುತ್ತಿದ್ದು, ಯಾವುದೇ ಗಲಾಟೆ, ಗೊಂದಲಗಳಿಗೆ ಅವಕಾಶವಿಲ್ಲವಾಗಿದೆ.
ಹೊಸ ಕ್ರಮಗಳಿಂದ ತಾವು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತಿದೆ ಎಂದು ರೈತರು ಸಂತಸಗೊಂಡಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಮಂಡಳಿಯ ಅಧ್ಯಕ್ಷರಿಗೆ ಜಾರಿಗೆ ತಂದಿರುವ ಪರಿಣಾಮಕಾರಿ ಬದಲಾವಣೆಗಳು ಇಡೀ ಮಾರುಕಟ್ಟೆಯಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸಿದ್ದು, ಎಲ್ಲ ಕಡೆಯಿಂದಲೂ ಸಕಾರಾತ್ಮಕ ಅಭಿಪ್ರಾಯಗಳು ಬರುತ್ತಿವೆ ಎಂದು ಹೇಳಿದರು.
ತಮ್ಮ ಅಚ್ಚುಮೆಚ್ಚಿನ ಮೈಸೂರು- ಕುಶಾಲನಗರ ರೈಲು ಸಂಪರ್ಕ ಯೋಜನೆಯು ಅಂತಿಮ ಹಂತ ತಲುಪಿದೆ. 85 ಕಿ.ಮೀ.ದೂರದ ಈ ಮಾರ್ಗದ ನಿರ್ಮಾಣಕ್ಕೆ 600 ಕೋಟಿ ಅವಶ್ಯಕತೆ ಇದ್ದು, ರಾಜ್ಯ ಸರ್ಕಾರ 300 ಕೋಟಿ ರು.ಗಳು ಹಾಗೂ ಭೂಮಿಯನ್ನು ರೈಲ್ವೆ ಇಲಾಖೆಗೆ ನೀಡಲಿದೆ. ಈ ಎಲ್ಲ ವಿಷಯಗಳನ್ನೊಳಗೊಂಡ ವಿಸ್ತೃತ ಯೋಜನಾ ವರದಿ(ಡಿಪಿಆರ್) ಈಗಾಗಲೇ ಯೋಜನಾ ಆಯೋಗದ ಮುಂದಿದ್ದು, ಯೋಜನಾ ಆಯೋಗದ ಒಪ್ಪಿಗೆ ದೊರೆತ ಕೂಡಲೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು  ಅವರು ತಿಳಿಸಿದರು.
ಪಿರಿಯಾಪಟ್ಟಣದ ಮಠಕ್ಕೆ ಹೋಗುವ ರಸ್ತೆ ದುರಸ್ತಿ ಮಾಡಲು ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮಾದಿಗ ಸಮಾಜದ ಪರವಾಗಿ ಮುಖಂಡ ಡಿ. ಕುಮಾರ್ ಮನವಿ ಮಾಡಿದ್ದು, ಸಂಸದ ಎಚ್. ವಿಶ್ವನಾಥ್ ಸೂಕ್ತ ಅನುದಾನ ಕೊಡಲು ಸಮ್ಮತಿ ಸೂಚಿಸಿ ಕೂಡಲೇ ಕ್ರಮವಹಿಸುವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮಂಡಳಿ ನಿರ್ದೇಶಕ ಜಯರಾಂ, ಮಹದೇವ್, ಐಟಿಸಿ ಕಂಪನಿಯ ಲೀಫ್ ವ್ಯವಸ್ಥಾಪಕ ರಾಜಶೇಖರ್, ಮುಖಂಡರಾದ ಉಂಡುವಾಡಿ ಸಿ. ಚಂದ್ರೇಗೌಡ, ಜಿಪಂ ಮಾಜಿ ಸದಸ್ಯ ಡಿ.ಕೆ. ಕುನ್ನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement