ಮೈವಿವಿ ಕುಲಸಚಿವರಿಂದ ಕಾನೂನು ಉಲ್ಲಂಘನೆ
ಕ.ಪ್ರ.ವಾರ್ತೆ ಮೈಸೂರು ಅ. 10
ಮೈಸೂರು ವಿವಿ ಕುಲಸಚಿವ ಪ್ರೊ. ಸಿ. ಬಸವರಾಜು ಅವರು ಹೈಕೋರ್ಟ್ ದಾರಿ ತಪ್ಪಿಸಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಶೇಖರ್ ಎಸ್. ಅಯ್ಯರ್ ಆರೋಪಿಸಿದರು.
ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕಳೆದ ಜು.29ರಂದು ಪ್ರೊ. ಸಿ. ಬಸವರಾಜು ಅವರು ಹೈಕೋರ್ಟ್ಗೆ ಹಾಜರಾಗಿ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಆದರೆ ವಕೀಲರಾದ ಅನುಸೂಯ ಮತ್ತು ನೋಟರಿ ಪುಲಿಕೇಶಿ ಮಠದ್ ಅವರ ಸಮ್ಮುಖದಲ್ಲಿ ಖುದ್ದಾಗಿ ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಏಕೆಂದರೆ ಅಂದು ಪ್ರೊ. ಸಿ. ಬಸವರಾಜು ಅವರು ಅನೇಕ ಕಾರ್ಯಕ್ರಮಗಳಲ್ಲಿ ಮತ್ತು ವಿವಿಯ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆ ಅನ್ವಯ ಆ ಮಾಹಿತಿ ಪಡೆದುಕೊಂಡಿದ್ದೇನೆ. ಅಂದು ಅವರು ಜೆಎಸ್ಎಸ್ ಕಾಲೇಜಿನ ಕಾರ್ಯಕ್ರಮ ಮತ್ತು ಮೈಸೂರು ವಿವಿಯ ಟೆಂಡರ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರ ಉಲ್ಲೇಖ ಇದೆ. ಅಲ್ಲದೆ ಅವರ ವಾಹನದ ಚಾಲಕರು ಮಾಹಿತಿ ಪುಸ್ತಕದಲ್ಲಿ ನಮೂದಿಸಿರುವಂತೆ ವಿವಿ ಮತ್ತು ಪ್ರೊ. ಸಿ. ಬಸವರಾಜು ಅವರ ಸ್ವಗೃಹ ಇರುವ ಕನಕದಾಸನಗರ ನಡುವೆ 35 ಕಿ.ಮೀ. ಪ್ರಯಾಣಿಸಿರುವುದನ್ನು ಮಾತ್ರ ದೃಢಪಡಿಸಿರುವುದಾಗಿ ಹೇಳಿದರು. ಈ ಪ್ರಕರಣದಲ್ಲಿ ಸ್ವತಃ ಕಾನೂನು ಪ್ರಾಧ್ಯಾಪಕರಾದ ಸಿ. ಬಸವರಾಜು ಮತ್ತು ಬೆಂಗಳೂರಿನ ವಕೀಲರಿಬ್ಬರು ತಪ್ಪು ಮಾಡಿರುವುದು ತಿಳಿಯುತ್ತದೆ ಎಂದರು.ಮತ್ತೊಂದು ಪ್ರಕರಣದಲ್ಲಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರು ಜುಲೈ ತಿಂಗಳಲ್ಲಿ ರಷ್ಯಾ ಪ್ರವಾಸಕ್ಕೆ ತೆರಳಿದ್ದರು. ಅವರ ಪ್ರಯಾಣ ವೆಚ್ಚವನ್ನು ಯಾರು ಭರಿಸಿದ್ದಾರೆ ಎಂಬ ಮಾಹಿತಿಯನ್ನು ಕೇಳಲಾಗಿತ್ತು. ಇದಕ್ಕೆ ವಿವಿಯು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ರಷ್ಯನ್ ವಿಜ್ಞಾನ ಅಕಾಡೆಮಿ ಭರಿಸಿರುವುದಾಗಿ ತಿಳಿಸಿತು. ಆದರೆ ಆ ಎರಡೂ ಸಂಸ್ಥೆಗಳೂ ನಾವು ರಂಗಪ್ಪ ಅವರ ಪ್ರಯಾಣ ವೆಚ್ಚ ಭರಿಸಿಲ್ಲ ಎಂದು ಇ-ಮೇಲ್ ಮೂಲಕ ಮಾಹಿತಿ ನೀಡಿವೆ. ಈ ಬಗ್ಗೆಯೂ ಸಹ ಮಾಹಿತಿ ಹಕ್ಕು ಮೂಲಕ ಯಾವ ಹಣದಿಂದ ರಷ್ಯಾ ಪ್ರವಾಸ ಮಾಡಿದ್ದಾರೆ ಎಂಬುದನ್ನು ತಿಳಿದು ಸಂಬಂಧಿಸಿದವರಿಗೆ ದೂರು ನೀಡುವುದಾಗಿ ಹೇಳಿದರು.